ಮಂಗಳೂರು, ಜೂ11(Daijiworld News/SS): ಈ ಬಾರಿ ರಾಜ್ಯದಲ್ಲಿ ಮುಂಗಾರು ವೇಳೆ ಕಡಲ್ಕೊರೆತ ಸೇರಿದಂತೆ ಭೂಕುಸಿತ, ಕೃತಕ ನೆರೆಯನ್ನು ನಿಭಾಯಿಸಲು ಈಗಾಗಲೇ ಜಿಲ್ಲಾಡಳಿತ ಸಜ್ಜಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು. ಟಿ. ಖಾದರ್ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಎನ್ಡಿಆರ್ಎಫ್ ಮತ್ತು ಅಗ್ನಿಶಾಮಕ ಸೇರಿದಂತೆ ವಿವಿಧ ಇಲಾಖಾಧಿಕಾರಿಗಳ ಸಭೆಯಲ್ಲಿ ಮುಂಗಾರಿನ ಸವಾಲುಗಳ ಬಗ್ಗೆ ಮಾಹಿತಿ ಪಡೆದ ಸಚಿವರು, ಬಂದರು ಮತ್ತು ಮೀನುಗಾರಿಕೆ ಅಧಿಕಾರಿಗಳಲ್ಲಿ ಕಡಲ್ಕೊರೆತ ತಡೆಗೆ ಮುನ್ನಚ್ಚರಿಕೆ ವಹಿಸಲು ನಿರ್ದೇಶನ ನೀಡಿದರು. ಎನ್'ಎಂಪಿಟಿಯಲ್ಲಿ ಎನ್ಡಿಆರ್ಎಫ್ ಪಡೆ ಈಗಾಗಲೇ ವಾಸ್ತವ್ಯ ಹೂಡಿದೆ. ಪ್ರಾಕೃತಿಕ ವಿಕೋಪ ತಡೆಗೆ ಎಲ್ಲ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಪ್ರಾಕೃತಿಕ ವಿಕೋಪ ವೇಳೆ ಹೋಮ್ಗಾರ್ಡ್ಗಳ ಸದ್ಬಳಕೆ ಹಾಗೂ ಅವರಿಗೆ ಅಗತ್ಯ ಮೂಲ ಸೌಕರ್ಯ ಒದಗಿಸುವ ಬಗ್ಗೆ ಸಲಹೆ ನೀಡಿದರು. ಜೊತೆಗೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜೀವರಕ್ಷ ಕರಾಗಿ ಕರ್ತವ್ಯ ನಿರ್ವಹಿಸುತ್ತಿರುವವರಿಗೆ ಯಾವ ರೀತಿ ನೆರವು ನೀಡಬಹುದೆಂಬ ಕುರಿತು ಸಭೆಯಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿದರು.
ಭೂಕುಸಿತ, ನೆರೆ ಸಂದರ್ಭ ಎನ್ಡಿಆರ್ಎಫ್ ಬಳಕೆ ಬಗ್ಗೆ ಸವಿವರ ಚರ್ಚೆ ನಡೆಯಿತು. ಅರಣ್ಯ ಇಲಾಖೆ ಮರಗಳ ತೆರವಿಗೆ ಸಂಬಂಧಿಸಿದಂತೆ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಪಡೆದರು.