ಮಂಗಳೂರು, ಜೂ11(Daijiworld News/SS): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅರಬ್ಬೀ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಮೋಡ ಕವಿ ವಾತಾವರಣ ನೆಲೆಸಿದ್ದು, ನಗರದಾದ್ಯಂತ ಆಗಾಗ ತುಂತುರು ಮಳೆಯಾಗುತ್ತಿದೆ.
ವಾಯುಭಾರ ಕುಸಿತ ಮಂಗಳವಾರ (ಜೂ.11) ಮಧ್ಯಾಹ್ನದ ವೇಳೆಗೆ ಚಂಡಮಾರುತವಾಗಿ ಪರಿವರ್ತನೆಗೊಳ್ಳಲಿದ್ದು, ಮುಂದಿನ ಎರಡು ಮೂರು ದಿನಗಳ ಕಾಲ ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಗಳಿವೆ. ರಾಜ್ಯದ ಹಲವೆಡೆ ಹಾಗೂ ಲಕ್ಷದ್ವೀಪ, ಕೇರಳ ಹಾಗೂ ಮಹಾರಾಷ್ಟ್ರದಲ್ಲಿ ಮಳೆಯಾಗಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವಿಜ್ಞಾನಿ ಎಸ್.ಎಸ್.ಎಂ. ಗವಾವಸ್ಕರ್ ತಿಳಿಸಿದ್ದಾರೆ.
ಕರಾವಳಿಯಲ್ಲಿ ಸಮುದ್ರ ಕಿನಾರೆಯಿಂದ ಈಗಾಗಲೇ ರಭಸದಿಂದ ಗಾಳಿ ಬೀಸಲಾರಂಭಿಸಿದೆ. ಇದು ಮುಂದಿನ ಎರಡು ದಿನಗಳ ಕಾಲ ತೀವ್ರವಾಗಲಿದೆ. ಮಂಗಳವಾರ ಗಾಳಿ ವೇಗ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ. ಗಂಟೆಗೆ 55ರಿಂದ 65 ಕಿಮೀ. ವೇಗದಲ್ಲಿ ಗಾಳಿ ಬೀಸುವ ನಿರೀಕ್ಷೆಯಿದೆ. ಚಂಡಮಾರುತ ಅರಬ್ಬೀ ಸಮುದ್ರದಲ್ಲಿ ಕರಾವಳಿಯಿಂದ 500 ಕಿಮೀ. ದೂರದಲ್ಲಿ ಕೇಂದ್ರೀಕೃತವಾಗಿದ್ದು, ರಾಜಸ್ತಾನದ ಕಡೆಗೆ ಸಾಗುವ ಸಾಧ್ಯತೆಗಳಿವೆ.
ಈ ಹಿನ್ನಲೆಯಲ್ಲಿ ಜೂ.11ರಿಂದ 13ರ ವರೆಗೆ ಕರ್ನಾಟಕ ಕರಾವಳಿಯಲ್ಲಿ ಹಳದಿ ಬಣ್ಣದ ಎಚ್ಚರಿಕೆ ನೀಡಲಾಗಿದೆ. ಚಂಡಮಾರುತಕ್ಕೆ ಭಾರತೀಯ ಹೆಸರಾದ ’ವಾಯು’ ಎಂದು ನಾಮಕರಣ ಮಾಡಲಾಗಿದೆ. ಚಂಡಮಾರುತದಿಂದ ಅರಬ್ಬೀ ಸಮುದ್ರ ಪ್ರಕ್ಷುಬ್ಧಗೊಂಡ ಹಿನ್ನೆಲೆಯಲ್ಲಿ ಕರಾವಳಿಯ ತೀರ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಮೀನುಗಾರರು ಹಾಗೂ ಪ್ರವಾಸಿಗರು ಸಮುದ್ರಕ್ಕಿಳಿದಂತೆ ಎಚ್ಚರಿಕೆ ನೀಡಲಾಗಿದೆ.
ಈ ನಡುವೆ ಮಂಗಳೂರಿನಲ್ಲಿ ಪಣಂಬೂರು, ತಣ್ಣೀರುಬಾವಿ, ಸಸಿಹಿತ್ಲು, ಉಳ್ಳಾಲ ಸೇರಿದಂತೆ ಬೀಚ್ಗಳಿಗೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ಪ್ರವಾಸಿಗರಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ.