ಮಂಗಳೂರು, ಜೂ 10 (Daijiworld News/SM): ದ.ಕ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗೋಸಾಗಾಟಕ್ಕೆ ನಮ್ಮ ಬೆಂಬಲವಿಲ್ಲ. ಅಕ್ರಮ ಗೋ ಸಾಗಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಮುಸ್ಲಿಂ ಲೀಗ್ ಹಾಗೂ ಮುಸ್ಲಿಂ ಯೂತ್ ಲೀಗ್ ಒತ್ತಾಯಿಸಿದೆ.
ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ಮಾತನಾಡಿದ ಜಿಲ್ಲಾಮುಸ್ಲಿಂ ಲೀಗ್ ಸಂಘಟನಾ ಕಾರ್ಯದರ್ಶಿ ಎಂ.ಕೆ. ಹಿದಾಯತ್ ಮಾರಿಪಳ್ಳ ಅವರು ಬೆಳ್ತಂಗಡಿಯಲ್ಲಿ ಗೋಸಾಗಾಟದ ವೇಳೆ ವಾಹನ ಪಲ್ಟಿಯಾಗಿ 5 ಜಾನುವಾರುಗಳು ಮೃತಪಟ್ಟ ಘಟನೆಯನ್ನು ನಾವು ಕಂಡಿಸುತ್ತೇವೆ ಎಂದರು.
ಈ ರೀತಿ ಅಮಾನವೀಯವಾಗಿ ಗೋವುಗಳನ್ನು ಕೊಂದು ಸಾಗಾಟ ಮಾಡಿ ಮಾಂಸ ಮಾಡುತ್ತಿರುವುದು ಕಾನೂನು ಬಾಹಿರವಾಗಿದೆ. ಅಕ್ರಮವಾದ ಯಾವುದೇ ಚಟುವಟಿಕೆಗಳಿಗೆ ನಮ್ಮ ಬೆಂಬಲವಿಲ್ಲ. ಅಕ್ರಮ ಗೋಸಾಗಾಟಕ್ಕಂತೂ ನಮ್ಮ ಸಂಘಟನೆ ಯಾವತ್ತೂ ಬೆಂಬಲ ನೀಡುವುದಿಲ್ಲ ಎಂದರು.
ಮತ್ತೆ ಇಂತಹ ಅಕ್ರಮ ಗೋಸಾಗಾಟ ಪ್ರಕರಣಗಳು ಕಂಡು ಬಂದಲ್ಲಿ ಅವರ ವಿರುದ್ಧ ಮುಂದಿನ ದಿನಗಳಲ್ಲಿ ನಾವು ಬೀದಿಗಿಳಿದು ಪ್ರತಿಭಟನೆ ಮಾಡಲಿದ್ದೇವೆ. ಕಾನೂನು ಬಾಹಿರ ಕೃತ್ಯಗಳಿಗೆ ಪೊಲೀಸರು ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.
ಅಪಘಾತಕ್ಕೀಡಾಗಿತ್ತು ಅಕ್ರಮ ಗೋಸಾಗಾಟದ ವಾಹನ:
ಇನ್ನು ಇತ್ತೀಚೆಗೆ ಕಳಸ ಕಡೆಯಿಂದ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಐಷರಾಮಿ ಕಾರು ಚಾರ್ಮಾಡಿ ಚೆಕ್ ಪೋಸ್ಟ್ ಸಿಬ್ಬಂದಿಯ ಕಣ್ತಪ್ಪಿಸಿ ಬಂದು ಬೆಳ್ತಂಗಡಿ ತಾಲೂಕಿನ ಮುಂಡಾಜೆ ಎಂಬಲ್ಲಿ ಅಪಘಾತಕ್ಕೀಡಾಗಿತ್ತು ಅಪಘಾತದ ತೀವ್ರತೆಗೆ 5 ಗೋವುಗಳು ವಾಹನದೊಳಗೆ ದಾರುಣವಾಗಿ ಮೃತಪಟ್ಟಿದ್ದವು. ಘಟನೆ ಸಂಬಂಧ ಚೆಕ್ ಪೋಸ್ಟ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಂಜುನಾಥ್ ಅವರನ್ನು ಕರ್ತವ್ಯ ಲೋಪ ಎಸಗಿದ ಮೇರೆಗೆ ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆಯೆಂದು ತಿಳಿದು ಬಂದಿದೆ.