ಬಂಟ್ವಾಳ, ಜೂ 10 (Daijiworld News/MSP): "ಕಡೇಶಿವಾಲಯ-ಅಜಿಲಮೊಗರನ್ನು ಸಂಪರ್ಕಿಸುವ ಸೌಹಾರ್ದ ಸೇತುವೆ ನನ್ನ ಕನಸಿನ ಯೋಜನೆಯಾಗಿದ್ದು, ಇದೀಗ ಸಕಾರಗೊಳ್ಳುತ್ತಿರುವುದು ತನಗೆ ಖುಷಿ ತಂದಿದೆ" ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ಸೋಮವಾರ ಕಡೇಶಿವಾಲಯದಲ್ಲಿ ಸೇತುವೆ ಕಾಮಗಾರಿಯನ್ನು ವೀಕ್ಷಿಸಿದ ಬಳಿಕ ಇಲ್ಲಿನ ದೇವಸ್ಥಾನದ ಮುಂಭಾಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದಕ್ಕೆ ಸೌಹಾರ್ದ ಸೇತುವೆ ಎಂಬ ಹೆಸರನ್ನಿಟ್ಟದ್ದೇ ತಾನು. ಇದು ನನ್ನದೇ ಕಲ್ಪನೆಯಾಗಿದೆ. ಕಡೇಶಿವಾಲಯ ಮತ್ತು ಅಜಿಲಮೊಗರನ್ನು ಸಂಪರ್ಕಿಸುವ ಸೇತುವೆಗೆ ಸ್ಥಳೀಯರು ತಾನು ಸಚಿವನಾಗಿದ್ದಾಗ ಬೇಡಿಕೆಯನ್ನಿಟ್ಟಿದ್ದರು. ಇದರಿಂದ ಸ್ಥಳೀಯರ ಬೇಡಿಕೆಯ ಮೇರೆಗೆ ಸರಕಾರಕ್ಕೆ ಪ್ರಸ್ತಾಪ ಸಲ್ಲಿಸಿದ್ದೆ. ಕಾಮಗಾರಿಗೆ ಮಂಜೂರಾತಿ ಕೊಡಿಸಿ, ಟೆಂಡರ್ ಪ್ರಕ್ರಿಯೆಯವರೆಗೂ ತನ್ನ ಅವಧಿಯಲ್ಲಿ ನಡೆದಿದೆ ಎಂದು ರೈ ಹೇಳಿದರು.
ಸ್ಥಳೀಯರು ಈ ಕುರಿತು ಹಲವಾರು ಬಾರಿ ಬೇಡಿಕೆ ಇಟ್ಟಿದ್ದು, ಕಡೇಶಿವಾಲಯ ಮತ್ತು ಮಣಿನಾಲ್ಕೂರು ಸಂಪರ್ಕ ಕೊಂಡಿಯಾಗಿರುವ ಈ ಸೇತುವೆ ನಿರ್ಮಾಣ ಕುರಿತು ಸರಕಾರಕ್ಕೆ ಪ್ರಸ್ತಾಪಿಸಿದ್ದೆ. ಮಂಜೂರುಗೊಳ್ಳುವುದು ಖಚಿತ ಎಂದಾದಾಗ 2016ರಲ್ಲಿ ತಾನು ಈ ಕುರಿತು ಘೋಷಣೆ ಮಾಡಿ, ಎರಡೂ ಧರ್ಮಗಳ ಸಂಪರ್ಕ ಸೇತುವೆಯಾದ ಕಾರಣ, ಸೌಹಾರ್ದ ಸೇತುವೆ ಎಂಬ ಹೆಸರನ್ನಿಟ್ಟಿದ್ದೆ. ಪಿಡಬ್ಲ್ಯುಡಿ ಯಿಂದ ಗಡಿಯಾರ-ಮಾವಿನಕಟ್ಟೆವರೆಗೆ ಸೇತುವೆಯನ್ನು ಸೇರಿಸಿ 31 ಕೋಟಿ ರೂ.ಗಳ ಅಂದಾಜುಪಟ್ಟಿ ಸಲ್ಲಿಸಲಾಗಿತ್ತು. ಬಳಿಕ ಇದನ್ನು ಕೆಆರ್ಡಿಸಿಎಲ್ಗೆ ನೀಡಲಾಯಿತು. 2017ನೇ ಇಸವಿಯಲ್ಲಿ ಸೇತುವೆ ಕಾಮಗಾರಿಗೆ ಮಂಜೂರಾತಿ ದೊರಕಿತು. 19.84 ಕೋಟಿ ರೂಗಳ ವೆಚ್ಚದಲ್ಲಿ ನಿರ್ಮಿಸಲಾಗುವ ಸೇತುವೆ ಕಾಮಗಾರಿಗೆ 2018ರಲ್ಲಿ ಟೆಂಡರ್ ಪ್ರಕ್ರಿಯೆಗಳು ಮುಗಿದಿದ್ದವು, ಇದೀಗ ಕಾಮಗಾರಿ ನಡೆಯುತ್ತಿದ್ದು, ಒಟ್ಟು 30 ತಿಂಗಳಲ್ಲಿ ಕೆಲಸ ಅಂತಿಮಗೊಳ್ಳಬೇಕಿದೆ ಎಂದರು.
ತಾನು ಸಚಿವನಾಗಿದ್ದಾಗ ಚಾಲನೆ ನೀಡಿದ ಕೆಲಸಗಳಾದ ಪಶ್ಚಿಮವಾಹಿನಿ, ಬಹುಗ್ರಾಮ ಕುಡಿಯುವ ನೀರು ಯೋಜನೆ ಕಾಮಗಾರಿಗಳು ಸಕಾಲಕ್ಕೆ ಜನರಿಗೆ ಉಪಯೋಗಕ್ಕೆ ದೊರಕಬೇಕು. ಈ ಕುರಿತು ತಾನು ಸದಾ ಗಮನಹರಿಸುತ್ತಿರುತ್ತೇನೆ ಎಂದ ರೈ, ಕಡೇಶಿವಾಲಯ ಗಡಿಯಾರ ರಸ್ತೆ ಅಭಿವೃದ್ಧಿ ಕುರಿತೂ ಚಿಂತನೆ ನಡೆದಿತ್ತು ಎಂದರು.
ಸೇತುವೆ ವಿಶೇಷತೆ:
312 ಮೀಟರ್ ಉದ್ದದ ಸೇತುವೆ ವಿಶೇಷತೆ:
ಸೇತುವೆ 312 ಮೀಟರ್ ಉದ್ದ, 10.5 ಮೀಟರ್ ಎತ್ತರವಿರಲಿದೆ. 19.84 ಕೋಟಿ ರೂ ವೆಚ್ಚವಾಗಲಿದ್ದು, 13 ಪಿಲ್ಲರ್, 14 ಫೌಂಡೇಶನ್ಗಳು ನಡೆಯಲಿವೆ. ಇಲ್ಲಿದ ರಸ್ತೆ 7.5 ಮೀಟರ್ ಅಗಲವುಳ್ಳದ್ದಾಗಲಿದ್ದು, ಸುಮಾರು 30 ತಿಂಗಳೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಕಾಮಗಾರಿ ಕುರಿತು ಇಂಜಿನಿಯರ್ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಬಿ.ಪದ್ಮಶೇಖರ ಜೈನ್, ಚಂದ್ರಪ್ರಕಾಶ್ ಶೆಟ್ಟಿ, ಮಂಜುಳಾ ಮಾವೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ತಾಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ, ಮಣಿನಾಲ್ಕೂರು ಗ್ರಾಪಂ ಅಧ್ಯಕ್ಷೆ ಗೀತಾ, ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕುಲಾಲ್, ಪ್ರಮುಖರಾದ ಮಾಯಿಲಪ್ಪ ಸಾಲಿಯಾನ್, ಸಂಪತ್ ಕುಮಾರ್ ಶೆಟ್ಟಿ, ಈಶ್ವರ ಪೂಜಾರಿ, ಕೆಆರ್ ಡಿಸಿಎಲ್ ಅಸಿಸ್ಟೆಂಟ್ ಇಂಜಿನಿಯರ್ ಮಂಜೇಶ್, ಗುತ್ತಿಗೆದಾರ ರಾಘವನ್ ಉಪಸ್ಥಿತರಿದ್ದರು.