ಮಂಗಳೂರು, ಜೂ 10 (Daijiworld News/MSP): ಮೈತ್ರಿ ಸರ್ಕಾರ ಸಚಿವ ಸಂಪುಟ ವಿಸ್ತರಣೆಯ ಕಸರತ್ತು ನಡೆಸುತ್ತಿರುವಂತೆಯೇ ಕರಾವಳಿಗೆ ಇನ್ನೊಂದು ಸಚಿವ ಸ್ಥಾನ ಸಿಗುವ ಸಾಧ್ಯತೆ ಹೆಚ್ಚಾಗಿದೆ. ಜೆಡಿಎಸ್ ಕೋಟಾದಲ್ಲಿ ವಿಧಾನಪರಿಷತ್ ಸದಸ್ಯ ಹಾಗೂ ಜೆಡಿಎಸ್ ಮಹಾಪ್ರಧಾನ ಕಾರ್ಯದರ್ಶಿ ಬಿ.ಎಂ. ಫಾರೂಕ್ ಅವರ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತಿದೆ.
ಬಹುದಿನಗಳಿಂದ ನೆನೆಗುದಿಗೆ ಬಿದ್ದಿದ್ದ ರಾಜ್ಯ ಸಚಿವ ಸಂಪುಟ ವಿಸ್ತರಣೆ ಜೂ.12ರಂದು ನಡೆಯುವ ಸಾಧ್ಯತೆ ಇದ್ದು, ಮೈತ್ರಿ ಸರ್ಕಾರದ ಸಚಿವ ಸಂಪುಟದಲ್ಲಿ ಜೆಡಿಎಸ್ ಕೋಟಾದಲ್ಲಿ ಇಬ್ಬರಿಗೆ ಸಚಿವರ ಸ್ಥಾನ ನೀಡುವ ಅವಕಾಶ ಇದೆ. ಈ ಹಿನ್ನಲೆಯಲ್ಲಿ ಸಿಎಂ ಎಚ್.ಡಿ.ಕೆ ಒಂದು ಸ್ಥಾನ ಪಕ್ಷೇತರರಿಗೆ ನೀಡಲು ಯೋಚಿಸಿದ್ದು, ಇನ್ನೊಂದು ಸ್ಥಾನವನ್ನು ಅಲ್ಪಸಂಖ್ಯಾತರ ಸಮುದಾಯಕ್ಕೆ ನೀಡುವ ಬಗ್ಗೆ ಓಲವು ವ್ಯಕ್ತವಾಗಿದೆ.
ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಕುಟುಂಬಕ್ಕೆ ಅಪ್ತರಾಗಿರುವ ಫಾರೂಕ್ ಪಕ್ಷದ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದ್ದಾರೆ. ಈ ಹಿಂದೆಯೇ ಫಾರೂಕ್ ಅವರನ್ನು ಸಚಿವ ಸಂಪುಟಕ್ಕೆ ಸೇರ್ಪಡೆಗೊಳಿಸಲು ದೇವೇಗೌಡ ಹಾಗೂ ಕುಮಾರ ಸ್ವಾಮಿ ಚಿಂತನೆ ನಡೆಸಿದ್ದರೂ ಕೂಡಾ ಮೈತ್ರಿ ಪಕ್ಷಗಳ ನಡುವೆ ಸಚಿವ ಸ್ಥಾನಗಳನ್ನು ಹಂಚಿಕೆ ಮಾಡುವ ಲೆಕ್ಕಾಚಾರದಲ್ಲಿ ಫಾರೂಕ್ಗೆ ಅವಕಾಶ ತಪ್ಪಿಹೋಗಿತ್ತು. ಆದರೆ ಅವರ ಹೆಸರು ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಮತ್ತೆ ಮುನ್ನಲೆಗೆ ಬಂದಿದೆ.
ಸುರತ್ಕಲ್ ಸಮೀಪದ ಕೃಷ್ಣಾಪುರದವರಾದ ಉದ್ಯಮಿ ಬಿ.ಎಂ. ಫಾರೂಕ್ ಅವರನ್ನು ಮೈತ್ರಿ ಸರಕಾರ ರಚನೆಯಾದ ಸಂದರ್ಭ ಜೆಡಿಎಸ್ ವತಿಯಿಂದ ವಿಧಾನಪರಿಷತ್ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿತ್ತು.