ಮಂಗಳೂರು, ಜೂ10(Daijiworld News/SS): ರಾಷ್ಟ್ರೀಯ ಹೆದ್ದಾರಿ 66ರ ತೊಕ್ಕೊಟ್ಟು ಜಂಕ್ಷನ್'ನಲ್ಲಿ ನಿರ್ಮಿಸಲಾಗಿರುವ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಂಡಿದ್ದರೂ, ಉದ್ಘಾಟನೆಯ ದಿನಾಂಕವನ್ನು ಮತ್ತೆ ಮುಂದೂಡಲಾಗಿದೆ.
ನಗರದ ಹೊರವಲಯದಲ್ಲಿರುವ ತೊಕ್ಕೊಟ್ಟು ಮೇಲ್ಸೇತುವೆ ಜೂ.10ರಂದು ಉದ್ಘಾಟನೆಯಾಗಬೇಕಿತ್ತು. ಆದರೆ ತಾಂತ್ರಿಕ ಕಾರಣಗಳಿಂದ ಉದ್ಘಾಟನಾ ದಿನಾಂಕವನ್ನು ಮುಂದೂಡಲಾಗಿದೆ. ಈ ವಿಚಾರವಾಗಿ ಜೂನ್ 14ರಂದು ಜನಪ್ರತಿನಿಧಿಗಳು, ಜಿಲ್ಲಾಡಳಿತ ಮತ್ತು ಹೆದ್ದಾರಿ ಇಲಾಖೆಯ ಅಧಿಕಾರಿಗಳ ಸಭೆ ನಡೆಯಲಿದ್ದು, ಸಭೆಯ ಬಳಿಕ ಮೇಲ್ಸೇತುವೆಯ ಉದ್ಘಾಟನೆಯ ದಿನಾಂಕ ನಿಗದಿ ಪಡಿಸುವುದಾಗಿ ಮೂಲಗಳಿಂದ ತಿಳಿದುಬಂದಿದೆ.
ಸಂಸದರ ಶಿಫಾರಸ್ಸಿನ ಮೇರೆಗೆ ತೊಕ್ಕೊಟ್ಟು ಮೇಲ್ಸೇತುವೆ ಕಾಮಗಾರಿ ನಡೆಸುವ ಸಂಸ್ಥೆಗೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೆಚ್ಚುವರಿ ಹಣವನ್ನು ಬಿಡುಗಡೆ ಮಾಡಿದ್ದರು. ಇದೀಗ ಕಾಮಗಾರಿ ಪೂರ್ಣಗೊಂಡಿದ್ದು, ಉದ್ಘಾಟನೆಗೆ ದಿನಾಂಕ ನಿಗದಿಯಾಗಬೇಕಿದೆ.
ತೊಕ್ಕೊಟ್ಟು ಮೇಲ್ಸೇತುವೆ ಕಾಮಗಾರಿ ಆರ್ಥಿಕ ಅಡಚಣೆಯಿಂದ 8 ವರ್ಷಗಳಿಂದ ಅಮೆಗತಿಯಲ್ಲಿ ಸಾಗಿತ್ತು. ತೊಕ್ಕೊಟ್ಟು ಮೇಲ್ಸೇತುವೆ ಹಾಗು ಪಂಪ್'ವೆಲ್ ಮೇಲ್ಸೇತುವೆ ಕಾಮಗಾರಿ ವಿಳಂಬ ವಿಚಾರ ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಭಾರೀ ಚರ್ಚೆಗೂ ಕಾರಣವಾಗಿತ್ತು. ಕಾಮಗಾರಿಯ ವಿಳಂಬಕ್ಕೆ ಕಾರಣ ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್ ಎಂದು ಆರೋಪಿಸಲಾಗಿತ್ತು. ಇದೀಗ ಕಾಮಗಾರಿ ಪೂರ್ಣಗೊಂಡಿದ್ದು, ಉದ್ಘಾಟನೆಯ ದಿನಾಂಕ ನಿಗದಿಯಾಗಬೇಕಿದೆ.