ಮಂಗಳೂರು ಡಿ 3: ಓಖಿ ಚಂಡಮಾರುತ ಎಫೆಕ್ಟ್ ಕರಾವಳಿಗೂ ತಟ್ಟಿದೆ. ಕರಾವಳಿಯಾದ್ಯಂತ ಭಾಗೀ ಗಾತ್ರದ ಅಲೆಗಳು ಸಮುದ್ರತೀರಕ್ಕೆ ಅಪ್ಪಳಿಸುತ್ತಿದ್ದು ಹಲವು ಮನೆಗಳು ಅಪಾಯಕ್ಕೆ ಸಿಲುಕಿವೆ. ಉಳ್ಳಾಲ, ಸೋಮೆಶ್ವರ ಭಾಗದಲ್ಲಿ ಕಡಲಿನ ಅಬ್ಬರ ಹೆಚ್ಚಾಗಿದೆ. ಸೋಮೇಶ್ವರ ಕಡಲತೀರದಲ್ಲಿ ಸಮುದ್ರದ ನೀರು ರಸ್ತೆವರೆಗೂ ಬಂದಿದ್ದು ಸ್ಥಳೀಯರು ಆತಂಕಿತರಾಗಿದ್ದಾರೆ.. . ಇನ್ನು ಸಮುದ್ರದ ಅಲೆಗೆ ಉಳ್ಳಾಲದ ರೆಸಾರ್ಟ್ ಒಂದರ ತಡೆಗೋಡೆ ಕುಸಿತಗೊಂಡಿದ್ದು ಭಯಭೀತರಾದ ಜನ ದಿಕ್ಕಾಪಾಲಾಗಿ ಓಡಿದ್ಡಾರೆ ಎನ್ನಲಾಗಿದೆ. ಈ ನಡುವೆ ಕಡಲಿನ ಅಬ್ಬರಕ್ಕೆ ಉಳ್ಳಾಲ ಸೀಗ್ರೌಂಡ್ ಪರಿಸರದಲ್ಲಿ 2 ಮನೆ ಸಂಪೂರ್ಣ ಮುಳುಗಡೆಯಾಗಿದೆ. ಫಿಲೋಮಿನಾ ಫೆರ್ನಾಂಡೀಸ್ ಮತ್ತು ಎವರೆಸ್ಟ್ ಅಲ್ಫೋನ್ಸ್ ಅವರಿಗೆ ಸೇರಿದ ಮನೆ ಇದಾಗಿದ್ದು ಚರ್ಚ್ ಗೆ ಹೋಗಿದ್ದ ಮನೆಮಂದಿ ವಾಪಾಸ್ ಬಂದಾಗ ಅವರ ಮನೆಯೇ ಇರಲಿಲ್ಲ. ಇಲ್ಲಿ ಸುಮಾರು 200 ಮೀಟರ್ ಒಳಕ್ಕೆ ಸಮುದ್ರದ ನೀರು ನುಗ್ಗಿ ಎರಡು ಮನೆ ಜಲಾವೃತಗೊಂಡಿದೆ. ಇನ್ನೊಂದು ಮನೆಗೆ ಭಾಗಶಃ ಹಾನಿಯಾಗಿದೆ. ಈ ಪರಿಸರದಲ್ಲಿ ಹಲವು ಮನೆಗಳಿದ್ದು ಎಲ್ಲರನ್ನು ಸ್ಥಳಾಂತರಿಸಲಾಗಿದೆ ಎಂದು ತಿಳಿದುಬಂದಿದೆ.ಇದಲ್ಲದೆ ಓಖಿ ಚಂಡಮಾರುತದ ಪರಿಣಾಮ ಉಡುಪಿಯ ಗಂಗೊಳ್ಳಿ, ಪಡುಕೆರೆಯಲ್ಲಿ ಭಾರಿ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ.ಅಲೆಗಳಿಂದ ದೋಣಿಗಳನ್ನು ರಕ್ಷಿಸಲು ಮೀನುಗಾರರ ಪರದಾಡುತ್ತಿದ್ದಾರೆ. ಪಡುಕೆರೆ, ಗಂಗೊಳ್ಳಿ, ಕಾಪು ಪರಿಸರದಲ್ಲಿ ಅಲೆಗಳ ಅಬ್ಬರ ಜೋರಾಗಿದ್ದು, ಗಂಗೊಳ್ಳಿಯಲ್ಲಿ ತಟದಲ್ಲಿರುವ ಬೋಟುಗಳ ತೆರವು ಮಾಡಲಾಗಿದೆ. ಕಾಪು ಪರಿಸರದಲ್ಲಿ ಮೂರು ಮನೆಗಳ ನಿವಾಸಿಗಳನ್ನು ಸ್ಥಳಾಂತರ ಮಾಡಲಾಗಿದೆ. ಪಡುಕೆರೆಯಲ್ಲಿ ಮೀನುಗಾರಿಕಾ ರಸ್ತೆಗೆ ಭಾರಿ ಅಲೆಗಳು ಅಪ್ಪಳಿಸುತ್ತಿವೆ. ಪ್ರಸ್ತುತ ಕಾಪು ಕಡಲ ಕಿನಾರೆಯಲ್ಲಿ ಸತತ ನಾಲ್ಕು ಗಂಟೆಗಳ ಅಬ್ಬರದ ಬಳಿಕ ಅಲೆಗಳ ರಭಸ ಇಳಿಮುಖವಾಗಿದೆ. ಕಾಪು ಬೀಚ್ ಬಳಿ ಪೊಲೀಸರು ಬೀಡುಬಿಟ್ಟಿದ್ದಾರೆ. ಸಮುದ್ರಕ್ಕಿಳಿಯದಂತೆ ಈಗಾಗಲೇ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ. ಸಮುದ್ರದ ಬಳಿ ವಾಸಿಸುತ್ತಿರುವ ನಿವಾಸಿಗಳಲ್ಲಿ ಆತಂಕ ಸೃಷ್ಟಿಯಾಗಿದೆ.