ಮಂಗಳೂರು, ಜೂ 10(Daijiworld News/MSP): ನಕಲಿ ಬಿಲ್ ತಯಾರಿಸಿ ಜಿಎಸ್ಟಿ ಪಾವತಿಸದೆ 83 ಕೋಟಿ ರೂ.ಗಳಷ್ಟು ವಂಚನೆ ನಡೆಸಿದ ಪ್ರಕರಣವನ್ನು ಮಂಗಳೂರಿನ ಕೇಂದ್ರೀಯ ಜಿಎಸ್ಟಿ ಕಮಿಷನರೇಟ್ ಬಯಲಿಗೆಳೆದಿದ್ದು, ಈ ಸಂಬಂಧ ಇಬ್ಬರನ್ನು ಬಂಧಿಸಿದೆ.
ಮಂಗಳೂರಿನ ಗುಜರಿ ವ್ಯಾಪಾರಿ, " ಮೆ. ತೌಹೀದ್ ಸ್ಕ್ರಾಪ್ ಡೀಲರ್ "ನ ಪಿ.ಕೆ. ಅಬ್ದುಲ್ ರಹೀಂ ಮತ್ತು "ಮೆ. ಎಂ.ಕೆ. ಟ್ರೇಡರ್ಸ್ "ನ ಮಾಲೀಕ ಅಬ್ದುಲ್ ಖಾದರ್ ಕೂಳೂರು ಚಾಯಬ್ಬ ಬಂಧಿತರು. ಇವರಿಬ್ಬರಿಗೂ ನ್ಯಾಯಾಂಗ ಬಂಧನ ವಿಧಿಸಿದೆ.
ಮಂಗಳೂರಿನ ಕೇಂದ್ರೀಯ ಜಿಎಸ್ಟಿ ಕಮಿಷನರೇಟ್ನ ತೆರಿಗೆಗಳ್ಳತನ ಪತ್ತೆ ತಂಡ ಖಚಿತ ಮಾಹಿತಿ ಮೇರೆಗೆ ಹಲವು ದಿನಗಳ ಕಾರ್ಯಾಚರಣೆ ನಡೆಸಿ ಈ ವಂಚನೆಯನ್ನು ಪತ್ತೆ ಮಾಡಿದೆ. ಈ ಸಂಸ್ಥೆಗಳು ರಾಜ್ಯದ ವಿವಿಧೆಡೆ ವ್ಯವಹಾರ ಸಂಬಂಧ ಹೊಂದಿದ್ದು, ಎರಡು ದಿನಗಳ ಹಿಂದೆ ಬೆಳ್ತಂಗಡಿ ಅಂಗಡಿಗೂ ಜಿಎಸ್ ಟಿ ಅಧಿಕಾರಿಗಳು ದಾಳಿ ನಡೆಸಿದ್ದರು. "ಎರಡು ಸಂಸ್ಥೆಗಳು ಸುಮಾರು 15 ಕೋಟಿ ಮೊತ್ತದ ನಕಲಿ ಬಿಲ್ ಬಳಕೆ ಮಾಡಿದ್ದು, ಒಟ್ಟು 83 ಕೋಟಿ ರೂ.ಮೊತ್ತದ ಸರಕು ಇದರಲ್ಲಿ ಒಳಗೊಂಡಿದೆ" ಎಂದು ಕೇಂದ್ರಿಯ ಜಿಎಸ್ ಟಿ ಕಮಿಷನರ್ ಧರ್ಮಸಿಂಗ್ ಪ್ರಕಟನೆ ತಿಳಿಸಿದೆ.
ಮೆ. ತೌಹೀದ್ ಸ್ಕ್ರಾಪ್ ಡೀಲರ್ ಮತ್ತು ಮೆ. ಎಂ.ಕೆ. ಟ್ರೇಡರ್ಸ್ ಸಂಸ್ಥೆಗಳು ಬೇರೆ ಬೇರೆ ಸಂಸ್ಥೆಗಳಿಂದ ಸರಕು ಸಾಗಾಟಕ್ಕೆ ಸಂಬಂಧಿಸಿ ನಕಲಿ ರಶೀದಿ ತಯಾರಿಸಿ ಅದರ ಆಧಾರದಲ್ಲಿ ನಕಲಿ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್(ಐಟಿಸಿ) ಪಡೆದು ಸರಕಾರಕ್ಕೆ ವಂಚಿಸುತ್ತಿದ್ದರು.
ಈ ನಕಲಿ ಐಟಿಸಿಗಳನ್ನು ಈ ಸಂಸ್ಥೆಗಳ ಮಾಲೀಕರು ನೋಂದಣಿ ರಹಿತ ವ್ಯಾಪಾರಿಗಳಿಂದ ಖರೀದಿಸಿದ ಲೋಹದ ಗುಜರಿ ಸಾಮಗ್ರಿಗಳನ್ನು ಅಲ್ಯೂಮಿನಿಯಂ ಎಂಎಸ್ಕಾಪರ್ ರಾಡ್ಸ್ ಇಂಗೊಟ್ಸ್ ಕಾಸ್ಟಿಂಗ್ಸ್ ಮತ್ತಿತರ ಸಾಮಗ್ರಿಗಳ ತಯಾರಿಕಾ ಸಂಸ್ಥೆಗಳಿಗೆ ಪೂರೈಕೆ ಮಾಡುವ ಸಂದರ್ಭದಲ್ಲಿ ಜಿಎಸ್ಟಿ ಪಾವತಿಯಿಂದ ತಪ್ಪಿಸಿಕೊಳ್ಳಲು ಉಪಯೋಗಿಸುತ್ತಿದ್ದರು ಎಂದು ತನಿಖೆಯಿಂದ ಬೆಳಕಿಗೆ ಬಂದಿದೆ.
ಅಲ್ಲದೆ ಅವರು ನಕಲಿ ಬಿಲ್ ಹೊಂದಿದವರಿಗೆ ನಕಲಿ ಐಟಿಸಿ ಕ್ರೆಡಿಟ್ ವರ್ಗಾವಣೆ ಮಾಡಲು ಕೂಡ ಈ ನಕಲಿ ಬಿಲ್ಗಳನ್ನು ಉಪಯೋಗಿಸುತ್ತಿದ್ದರು ಎಂದು ಗೊತ್ತಾಗಿದೆ. ಆರೋಪಿಗಳು ನಕಲಿ ಬಿಲ್ ತಯಾರಿಸುವ ವ್ಯಕ್ತಿಗೆ ಶೇ.3ರಷ್ಟು ಕಮಿಷನ್ ಪಾವತಿ ಮಾಡುತ್ತಿದ್ದರು ಎಂಬುದು ತನಿಖೆಯಿಂದ ಬಯಲಾಗಿದೆ.