ಬೆಳ್ತಂಗಡಿ, ಜೂ 10(Daijiworld News/MSP): ಚಾರ್ಮಾಡಿ ಕಡೆಯಿಂದ ಐಷಾರಾಮಿ ಕಾರಲ್ಲಿ ದನ ಸಾಗಾಟಕ್ಕೆ ಯತ್ನಿಸಿ ಮುಂಡಾಜೆ ಸಮೀಪ ಕಾರು ಪಲ್ಟಿಯಾಗಿ ದನಗಳ ಮಾರಣಹೋಮ ಪ್ರಕರಣಕ್ಕೆ ಸಂಬಂಧಿಸಿ ಚೆಕ್ಪೋಸ್ಟ್ನಲ್ಲಿ ಕರ್ತವ್ಯದಲ್ಲಿದ್ದ ಪೇದೆಯೋರ್ವರನ್ನು ಅಮಾನತು ಮಾಡುವಂತೆ ಆದೇಶ ಹೊರಡಿಸಲಾಗಿದೆ.
ಹಿಂಸಾತ್ಮಕವಾಗಿ ದನ ಸಾಗಿಸುತ್ತಿದ್ದ ಕಾರು ಜೂ. 7ರಂದು ಬೆಳಗ್ಗೆ ಚಾರ್ಮಾಡಿ ಚೆಕ್ಪೋಸ್ಟ್ ಸಿಬಂದಿ ಕಣ್ತಪ್ಪಿಸಿ ಬಂದು ಮು೦ಡಾಜೆ ಬಳಿ ನಿಯಂತ್ರಣ ತಪ್ಪಿ ಪಲ್ಟಿಯಾಗಿತ್ತು. ಅದರಲ್ಲಿದ್ದ ದನಗಳ ಪೈಕಿ 5 ಹಸುಗಳು ಸಾವನ್ನಪ್ಪಿದ್ದವು. ಆರೋಪಿಗಳು ಪರಾರಿಯಾಗಿದ್ದರು. ಪ್ರಕರಣ ಸಂಬಂಧ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಚೆಕ್ಪೋಸ್ಟ್ ಸಿಬಂದಿಗಳ ಕರ್ತವ್ಯ ಲೋಪ ಬಗ್ಗೆ ಸ್ಥಳೀಯರು ತೀವ್ರ ಆಕ್ರೋಶಗೊಂಡಿದ್ದರು.
ಈ ಸಂಬಂಧ ತನಿಖಾಧಿಕಾರಿ ಬೆಳ್ತಂಗಡಿ ಸಿಐ ಸಂದೇಶ್ ಪಿ.ಜಿ. ಅವರು ವರದಿ ಸಲ್ಲಿಸಿದ್ದು, ಕರ್ತವ್ಯ ಲೋಪ ಎಸಗಿದ ಮೇರೆಗೆ ಧರ್ಮಸ್ಥಳ ಪೊಲೀಸ್ ಠಾಣೆಯ ಪಿ.ಸಿ. ಮಂಜುನಾಥ್ ಅವರನ್ನು ಅಮಾನತು ಮಾಡಿ ಎಸ್ಪಿ ಆದೇಶ ಹೊರಡಿಸಿದ್ದಾರೆ. ಮಂಜುನಾಥ್ ಅವರು ಹೊಸದಾಗಿ ಧರ್ಮಸ್ಥಳ ಠಾಣೆಗೆ ನೇಮಕವಾಗಿ ಬಂದಿದ್ದರು.