ಮಂಗಳೂರು, ಜೂ10(Daijiworld News/SS): ನಗರದ ಪ್ರಮುಖ ಪ್ರದೇಶಗಳಲ್ಲಿರುವ ಬೃಹತ್ ಚರಂಡಿಗಳ ಮತ್ತು ರಾಜಕಾಲುವೆಗಳ ಹೂಳೆತ್ತುವ ಕಾರ್ಯವನ್ನು ಶೀಘ್ರ ನಡೆಸಬೇಕು ಎಂದು ಶಾಸಕ ವೇದವ್ಯಾಸ ಕಾಮತ್ ಅಧಿಕಾರಿಗಳಿಗೆ ಸೂಚನೆ ನೀಡಿದ ಬೆನ್ನಲ್ಲೇ, ಹೂಳೆತ್ತುವ ಕಾರ್ಯ ನಡೆದಿರುವುದು ಬರ್ಕೆ ಪರಿಸರದಲ್ಲಿ ವಾಸಿಸುವ ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ನಗರದ ಕೆಲವೆಡೆ ಅಧಿಕಾರಿಗಳ ಬೇಜವಾಬ್ದಾರಿಗಳ ಪರಿಣಾಮ ಕಾಲುವೆಗಳ ಮತ್ತು ಚರಂಡಿಗಳ ಹೂಳೆತ್ತುವ ಕಾರ್ಯ ವಿಳಂಬಗತಿಯಲ್ಲಿ ನಡೆಯುತ್ತಿದೆ ಎನ್ನುವ ದೂರು ಬಂದ ಕಾರಣ ಶಾಸಕ ವೇದವ್ಯಾಸ ಕಾಮತ್ ಬರ್ಕೆ, ಗುಂಡೂರಾವ್ ಲೈನ್, ಕಾಂತರಾಜ್ ಶೆಟ್ಟಿ ಲೈನ್, ಮಣ್ಣಗುಡ್ಡೆ ಸಹಿತ ಪರಿಸರದ ಅನೇಕ ಬೃಹತ್ ಚರಂಡಿಗಳ ಮತ್ತು ರಾಜಕಾಲುವೆಗಳನ್ನು ಸ್ಥಳೀಯರೊಂದಿಗೆ ಸೇರಿ ಜೂ.09ರ ಬೆಳಗ್ಗಿನ ವೇಳೆ ಪರಿಶೀಲನೆ ನಡೆಸಿದ್ದರು. ಮಾತ್ರವಲ್ಲ, ಶೀಘ್ರವಾಗಿ ಹೂಳೆತ್ತುವ ಕಾರ್ಯ ಪ್ರಾರಂಭಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದ್ದರು.
ತಕ್ಷಣ ಎಚ್ಚೆತ್ತುಕೊಂಡ ಅಧಿಕಾರಿಗಳು ಶಾಸಕರು ನೀಡಿದ ಸೂಚನೆಯಂತೆ, ಪರಿಶೀಲನೆ ನಡೆಸಿದ ದಿನದಂದೇ ಹೂಳೆತ್ತುವ ಕಾರ್ಯ ಪ್ರಾರಂಭಿಸಿದ್ದಾರೆ. ಮಳೆ ಬರುವ ಮುನ್ನ ಕಾಲುವೆ ಮತ್ತು ಚರಂಡಿಗಳ ಹೂಳೆತ್ತುವ ಕಾರ್ಯ ಆರಂಭವಾಗಿರುವುದರಿಂದ ಪರಿಸರದ ಜನರೂ ಕೂಡ ನಿಟ್ಟುಸಿರು ಬಿಟ್ಟಿದ್ದಾರೆ.
ಈ ನಡುವೆ ಜನರ ಸಮಸ್ಯೆಯನ್ನು ಆಲಿಸಿ ತಕ್ಷಣ ಸ್ಥಳಕ್ಕೆ ಬಂದು ಸಮಸ್ಯೆಯನ್ನು ಪರಿಹರಿಸಿ ಕೊಟ್ಟ ಶಾಸಕ ವೇದವ್ಯಾಸ ಕಾಮತ್ ಅವರ ಕೆಲಸಕ್ಕೂ ಸ್ಥಳೀಯರಿಂದ ಮೆಚ್ಚುಗೆ ವ್ಯಕ್ತವಾಗಿದೆ.