ಬಂಟ್ವಾಳ,ಜೂ08(DaijiWorldNews/AZM):ರೈಲ್ವೆ ಇಲಾಖೆಗೆ ಸಂಬಂಧಿಸಿದಂತೆ ಸ್ಥಳೀಯರ ಬೇಡಿಕೆ ಹಾಗೂ ದೂರುಗಳಿಗೆ ಸೂಕ್ತವಾದ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಂಸದ ನಳಿನ್ ಕುಮಾರ್ ಕಟೀಲ್ ರವರು ರೈಲ್ವೆ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಬಿಸಿರೋಡಿನ ರೈಲ್ವೆ ನಿಲ್ದಾಣದ ಕಾಮಗಾರಿ ವೀಕ್ಷಣೆ ಸಂದರ್ಭದಲ್ಲಿ ಈ ಕುರಿತು ಅವರು ಮಾದ್ಯಮದವರೊಂದಿಗೆ ಮಾತನಾಡಿದರು. ಮುಂದಿನ ಫೆಬ್ರವರಿ ತಿಂಗಳೊಳಗೆ ಬಂಟ್ವಾಳ ರೈಲ್ವೆ ಸ್ಟೇಶನ್ ನಲ್ಲಿ 5.5 ಕೋಟಿ ಕೇಂದ್ರ ಆದರ್ಶ ಯೋಜನೆಯಡಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು.
ಇದೇ ವೇಳೆ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಅವರು ಅಧಿಕಾರಿಗಳಿಗೆ ಕಾಮಗಾರಿ ವೇಗವಾಗಿ ನಡೆಸುವ ಕುರಿತು ಸಲಹೆ ಸೂಚನೆಗಳನ್ನು ನೀಡಿದರು.ಬಂಟ್ವಾಳ ರೈಲ್ವೆ ನಿಲ್ದಾಣದಲ್ಲಿರುವ ಎರಡು ಪ್ಲಾಟ್ ಫಾರ್ಮ್ ಗಳ ವಿಸ್ತರಣಾ ಕಾರ್ಯ ನಡೆಯುತ್ತಿದ್ದು, ಮೊದಲನೇ ಪ್ಲಾಟ್ ಫಾರ್ಮ್ ಶೇ.50 ಮತ್ತು ಎರಡನೇ ಪ್ಲಾಟ್ ಫಾರ್ಮ್ ಶೇ.60ರಷ್ಟು ಕೆಲಸಗಳಾಗಿವೆ. 67 ಲಕ್ಷ ರೂ ವೆಚ್ಚದಲ್ಲಿ ಪಾದಚಾರಿ ಮೇಲ್ಸೇತುವೆ ನಿರ್ಮಾಣ ಕಾರ್ಯ ಆರಂಭಗೊಂಡಿದ್ದು, ಇದಾದರೆ ರೈಲು ನಿಲ್ದಾಣ ಬಿ.ಸಿ.ರೋಡಿಗೆ ಮತ್ತಷ್ಟು ಹತ್ತಿರವಾಗಲಿದೆ ಎಂದರು.
ಪ್ಲಾಟ್ ಫಾರ್ಮ್ ಗೆ ಮೇಲ್ಛಾವಣಿ, ವಿದ್ಯುದ್ದೀಪ, ಪ್ರಯಾಣಿಕರಿಗೆ ಆಸನಗಳ ವ್ಯವಸ್ಥೆ, ಶುದ್ಧೀಕರಿಸಿದ ಕುಡಿಯುವ ನೀರು, ಅಂಗವಿಕಲರಿಗೆ ವಿಶೇಷ ಶೌಚಗೃಹ, ಹೊಸ ಶೌಚಾಲಯ ಕಾಂಪ್ಲೆಕ್ಸ್ ರಚನೆ, ರೈಲ್ವೆ ಸೇತುವೆಯಲ್ಲಿ ನಡೆದುಕೊಂಡು ಹೋಗಲು ಹಳಿಯ ಬಳಿಯಲ್ಲಿ ಕಿತ್ತು ಹೋಗಿರುವ ಶೀಟ್ ಗಳನ್ನು ಮತ್ತೆ ಹಾಕಿಸುವ ಕಾರ್ಯಗಳನ್ನು ಮಾಡಲಾಗುವುದು ಎಂದರು.
ತತ್ಕಾಲ್ ಬುಕ್ಕಿಂಗ್ ಸಂದರ್ಭ ಮಧ್ಯವರ್ತಿಗಳದ್ದೇ ಹಾವಳಿ ಜಾಸ್ತಿ ಇರುತ್ತದೆ. ಇಂಥ ಸನ್ನಿವೇಶಗಳು ನಿರ್ಮಾಣವಾಗದಂತೆ ಎಚ್ಚರವಹಿಸಬೇಕು ಎಂದು ಸಾರ್ವಜನಿಕರ ದೂರುಗಳು ಬಂದಿವೆ, ಈ ಕುರಿತು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು, ರೈಲ್ವೆ ನಿಲ್ದಾಣದಲ್ಲಿ ಸಿಸಿ ಕ್ಯಾಮರಾ ಅಳವಡಿಸುವುದು ಹಾಗೂ ಅಕ್ರಮ ಚಟುವಟಿಕೆಗಳು ನಡೆಸದಂತೆ ಸಿಸಿ ಕ್ಯಾಮರಾ ನಿಗಾ ವಹಿಸಲಿದೆ ಎಂದು ತಿಳಿಸಿದರು.,
ಕೈಕುಂಜೆ ಪೂರ್ವ ಬಡಾವಣೆಗೆ ತಿರುಗುವ ರಸ್ತೆ ಸಹಿತ ಯಾವುದೇ ಜನವಸತಿ ಪ್ರದೇಶಗಳಿಗೆ ತೆರಳುವ ರಸ್ತೆಗಳನ್ನು ಕಾಮಗಾರಿ ಸಂದರ್ಭ ಮುಚ್ಚುವುದಿಲ್ಲ, ಈ ಕುರಿತು ಸ್ಥಳೀಯರಲ್ಲಿ ಆತಂಕ ಬೇಡ ಎಂದು ನಳಿನ್ ಸ್ಪಷ್ಟಪಡಿಸಿ, ಅಧಿಕಾರಿಗಳಿಗೆ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾಮಗಾರಿ ನಡೆಸುವಂತೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಬಂಟ್ವಾಳ ಬಿಜೆಪಿ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ, ಬಿಜೆಪಿ ಜಿಲ್ಲಾ ವಕ್ತಾರ ಕೆ.ಹರಿಕೃಷ್ಣ ಬಂಟ್ವಾಳ, ನಾಯಕಿ ಸುಲೋಚನಾ ಜಿ.ಕೆ.ಭಟ್, ಪುರಸಭಾ ಸದಸ್ಯ ಎ.ಗೋವಿಂದ ಪ್ರಭು, ಪ್ರಮುಖರಾದ ರಮಾನಾಥ ರಾಯಿ, ಪುರುಷೋತ್ತಮ ಶೆಟ್ಟಿ, ಸ್ಥಳೀಯರಾದ ಫ್ರಾನ್ಸಿಸ್ ಮತ್ತಿತರರು ಉಪಸ್ಥಿತರಿದ್ದರು.