ಬಂಟ್ವಾಳ ,ಡಿ.23(DaijiworldNews/AK): ಮಕ್ಕಳ ಭವಿಷ್ಯಕ್ಕೆ ಭದ್ರ ಬುನಾದಿ ಹಾಕುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣದಲ್ಲಿ ಪಠ್ಯದ ಜೊತೆಗೆ ಸಹಪಠ್ಯ ಚಟುವಟಿಕೆಗಳಿಗೂ ಮಹತ್ವ ಸಿಗಬೇಕು, ಬಾಲವಿಕಾಸ ವಿದ್ಯಾಸಂಸ್ಥೆಯಲ್ಲಿ ಈ ಬಗೆಯ ಶಿಕ್ಷಣ ವ್ಯವಸ್ಥೆ ಅನುಷ್ಠಾನಗೊಂಡಿರುವುದು ಪ್ರಶಂಸನೀಯ ಎಂದು ಮೂಡಬಿದ್ರೆ ಆಳ್ವಾಸ್ ವಿದ್ಯಾಸಂಸ್ಥೆಗಳ ಸಂಸ್ಥಾಪಕ ಡಾ.ಎಂ.ಮೋಹನ ಆಳ್ವ ಹೇಳಿದ್ದಾರೆ.
ಶನಿವಾರ ಮಾಣಿ ಪೆರಾಜೆಯ ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆಯ ವಸತಿ ಶಾಲೆಗೆ ಚಾಲನೆ ನೀಡಿ, ಶಾಲಾ ವಾರ್ಷಿಕೋತ್ಸವ "ವಿಕಾಸ ವೈಭವ" ವನ್ನು ಉದ್ಘಾಟಿಸಿ ಅವರು ಮಾತನಾಡಿ, ಕಾಲದ ಅಗತ್ಯಕ್ಕೆ ಸರಿಯಾಗಿ ಶಿಕ್ಷಣ ವ್ಯವಸ್ಥೆಯನ್ನು ಕಟ್ಟುವ ಕಾರ್ಯ ಶಿಕ್ಷಣ ಸಂಸ್ಥೆಗಳಿಂದ ನಡೆಯುತ್ತಿದೆ ಎಂದ ಅವರು, ಬಾಲವಿಕಾಸ ವಿದ್ಯಾಸಂಸ್ಥೆಯಲ್ಲಿ ಮನಸು ಕಟ್ಟುವ ಕೆಲಸವೂ ನಡೆಯುತ್ತಿದೆ ಎಂದು ಶ್ಲಾಘಿಸಿದರು.
ಹಲವು ಕಡೆಗಳಲ್ಲಿ ಜಾತಿ ಮತ ಧರ್ಮದ ಹೆಸರಿನಲ್ಲಿ ಶಿಕ್ಷಣದ ವ್ಯಾಪಾರೀಕರಣವೂ ನಡೆಯುತ್ತಿದ್ದು, ಪೋಷಕರು ಶಿಕ್ಷಣ ವ್ಯವಸ್ಥೆಯಲ್ಲಿನ ಸೇವೆ ಹಾಗೂ ವ್ಯಾಪಾರೀ ಮನೋಭಾವದ ಭಿನ್ನತೆಗಳನ್ನು ಅರ್ಥಮಾಡಿಕೊಳ್ಳಬೇಕೆಂದರು.
ಇದೇ ಸಂದರ್ಭ ಬಾಲವಿಕಾಸ ಶಾಲೆಯ ಹಿರಿಯ ವಿದ್ಯಾರ್ಥಿ, ಕಲ್ಲಡ್ಕ ಮ್ಯೂಸಿಯಂ ಸಂಸ್ಥಾಪಕ ಮಹಮ್ಮದ್ ಯಾಸೀರ್ ಅವರಿಗೆ ಬಾಲವಿಕಾಸ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ರಾಜ್ಯಮಟ್ಟದ ವಿದ್ಯಾರತ್ನ ಪ್ರಶಸ್ತಿ ಪುರಸ್ಕೃತರಾದ ಬಾಲವಿಕಾಸ ಶಾಲೆಯ ಮುಖ್ಯ ಶಿಕ್ಷಕಿ ಸುಪ್ರಿಯಾ ಡಿ.ಯವರನ್ನು ಸನ್ಮಾನಿಸಲಾಯಿತು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕರಾದ ವಿವೇಕ್ ವಿನ್ಸೆಂಟ್ ಪಾಯಸ್ ಅವರು ಬಾಲವಿಕಾಸ ಶಾಲೆಯ ನೂತನ ವೆಬ್ಸೈಟ್ ಅನಾವರಣ ಗೊಳಿಸಿದರು. ಪ್ರಹ್ಲಾದ್ ಜೆ ಶೆಟ್ಟಿಯವರ ದೂರದೃಷ್ಟಿಯ ಚಿಂತನೆಯಿಂದ ಸುಂದರವಾದ ಬಾಲವಿಕಾಸ ವಿದ್ಯಾಸಂಸ್ಥೆ ರೂಪುಗೊಂಡು ಮಾದರಿಯಾಗಿ ಮುನ್ನಡೆಯುತ್ತಿದ್ದು, ಯಾಸಿರ್ ರಂತಹಾ ಅನೇಕ ಮುತ್ತುರತ್ನಗಳನ್ನು ಬಾಲವಿಕಾಸ ಸೃಷ್ಟಿಸಿದೆ ಎಂದರು.
ಬಾಲವಿಕಾಸ ಟ್ರಸ್ಟ್ ಅಧ್ಯಕ್ಷರೂ, ಶಾಲಾ ಸಂಚಾಲಕರೂ ಆದ ಪ್ರಹ್ಲಾದ್ ಜೆ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಬಾಲವಿಕಾಸ ವಿದ್ಯಾಸಂಸ್ಥೆಯಲ್ಲಿ ಮಕ್ಕಳ ಗುಣಾತ್ಮಕ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಅನೇಕ ಪೋಷಕರ ಬೇಡಿಕೆಯಂತೆ ಬಾಲವಿಕಾಸ ವಸತಿ ಶಾಲೆಯನ್ನು ಆರಂಭಿಸಲಾಗಿದೆ ಎಂದರು.
ಬಾಲವಿಕಾಸ ಟ್ರಸ್ಟ್ ಕಾರ್ಯದರ್ಶಿ ಮಹೇಶ್ ಜೆ. ಶೆಟ್ಟಿ, ಉಪಾಧ್ಯಕ್ಷ ಯತಿರಾಜ್ ಕೆ.ಎನ್, ಟ್ರಸ್ಟಿಗಳಾದ ಸುಭಾಷಿಣಿ ಎ. ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಾಧಕ ವಿದ್ಯಾರ್ಥಿಗಳನ್ನು ಇದೇ ಸಂದರ್ಭ ಗೌರವಿಸಲಾಯಿತು.
ಶಾಲಾಮುಖ್ಯ ಶಿಕ್ಷಕಿ ಸುಪ್ರಿಯಾ ಡಿ.ಸ್ವಾಗತಿಸಿದರು. ಶಾಲಾ ವಿದ್ಯಾರ್ಥಿ ನಾಯಕಿ ಸಾಕ್ಷಿ ವಂದಿಸಿದರು. ಶಾಲಾ ವ್ಯವಸ್ಥಾಪಕಿ ನಯನ ಭಟ್ ಸಹಕರಿಸಿದರು. ಶಿಕ್ಷಕಿಯರಾದ ಲೀಲಾಮಯ್ಯ, ಶೋಭಾ ಎಂ.ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.