ಮಂಗಳೂರು, ಡಿ.23(DaijiworldNews/AA): ಕರಾವಳಿ ಉತ್ಸವದಲ್ಲಿ ಕರಾವಳಿಯ ನೈಜ ಸಂಸ್ಕೃತಿ ಸಾಹಿತ್ಯ, ಉಡುಗೆತೊಡುಗೆಗಳು, ಸಂಸ್ಕೃತಿಯ ಅನಾವರಣದೊಂದಿಗೆ ಡಿ.21ರಿಂದ ಜನವರಿ 19ರವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ಕರಾವಳಿ ಉತ್ಸವವನ್ನು ದ.ಕ ಜಿಲ್ಲಾಡಳಿತ ಆಯೋಜಿಸಿದೆ.
ಮಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ರೊಬೊಟಿಕ್ ಬಟರ್ ಫ್ಲೈ ಪ್ರದರ್ಶನ ನಡೆಯುತ್ತಿದೆ. ಡಿ. 22ರಂದು ಪ್ರಾರಂಭವಾದ ಈ ರೊಬೊಟಿಕ್ ಬಟರ್ ಫ್ಲೈ ಪ್ರದರ್ಶನವು ನಗರದ ಕದ್ರಿ ಪಾರ್ಕ್ ನಲ್ಲಿ ಸಂಜೆ 4 ರಿಂದ ರಾತ್ರಿ 9ರ ವರೆಗೆ ನಡೆಯಲಿದೆ.
ಡಿಸೆಂಬರ್ 22ರಿಂದ ಡಿಸೆಂಬರ್ 30ರ ವರೆಗೆ ವಸ್ತು ಪ್ರದರ್ಶನ ವೇದಿಕೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಪ್ರಸಿದ್ಧ ಕಲಾವಿದರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನ ನಡೆಯಲಿದೆ. ಕನ್ನಡ, ತುಳು, ಬ್ಯಾರಿ, ಕೊಂಕಣಿ, ಅರೆ ಭಾಷೆ ಅಕಾಡೆಮಿಗಳ ಸಹಕಾರದೊಂದಿಗೆ ನಡೆಯಲಿರುವ ಉತ್ಸವದಲ್ಲಿ ಕರಾವಳಿಯ ವೈವಿಧ್ಯತೆಗಳು ಸಾರ್ವಜನಿಕರನ್ನು ರಂಜಿಸಲಿವೆ.
ವೇದಿಕೆಯಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು ಈ ಕೆಳಗಿನಂತಿವೆ:
* ಡಿಸೆಂಬರ್ 22ರಂದು ಸಂಜೆ 6.30ರಿಂದ ಟಿಸಿಆರ್ ಬ್ಯಾಂಡ್ ಮತ್ತು ಬಳಗವು ವಿವಿಧ ಭಾಷೆಗಳ ಹಾಡುಗಳನ್ನು ಹಾಡುವ ಮೂಲಕ ಪ್ರೇಕ್ಷಕರನ್ನು ರಂಜಿಸಿತು.
* ಡಿಸೆಂಬರ್ 23ರಂದು ಸಂಜೆ 6.30ರಿಂದ ನೃತ್ಯೋಪಾಸನಾ ಕಲಾ ಅಕಾಡೆಮಿ(ರಿ) ಪುತ್ತೂರು ವತಿಯಿಂದ ನೃತ್ಯರೂಪಕ ನಡೆಯಲಿದೆ.
* ಡಿಸೆಂಬರ್ 24ರಂದು ಸಂಜೆ 6.30 ರಿಂದ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ನಿರ್ದೇಶನದ ಚಾ ಪರ್ಕ ತಂಡದಿಂದ ತುಳು ಹಾಸ್ಯನಾಟಕ 'ಎರ್ಲಾ ಗ್ಯಾರಂಟಿಯತ್' ಪ್ರದರ್ಶನಗೊಳ್ಳಲಿದೆ.
* ಡಿಸೆಂಬರ್ 25ರಂದು ಸಂಜೆ 6.30ರಿಂದ ಝೀ ಟಿವಿ, ಕಲರ್ಸ್ ಕನ್ನಡ, ಸ್ಟಾರ್ ಸುವರ್ಣ, ಈ ಟಿವಿ ಖ್ಯಾತಿಯ ಕಲಾವಿದರಿಂದ ಮಧುರ ಗೀತೆಗಳು ಪ್ರೇಕ್ಷಕರನ್ನು ರಂಜಿಸಲಿದೆ.
* ಡಿಸೆಂಬರ್ 26ರಂದು ಸಂಜೆ 6.30ರಿಂದ ಸುರ್-ಸ್ವಾಗರ್ ಲೋಕೇಶ್ ಸಾಲ್ಯಾನ್ ಬ್ಯಾಂಡ್ ಮತ್ತು ಬಳಗದಿಂದ ಫ್ಯೂಶನ್ ಬ್ಯಾಂಡ್ ಕಾರ್ಯಕ್ರಮ ನಡೆಯಲಿದೆ.
* ಡಿಸೆಂಬರ್ 27ರಂದು ಸಂಜೆ 6.30 ರಿಂದ ರಂಜನ್ ಬ್ಯೂರಾ & ಬಳಗ, ಬೆಂಗಳೂರು ವತಿಯಿಂದ ಮೆಲ್ಲೊಟ್ರೀ ಖ್ಯಾತಿಯ ಕಲಾವಿದರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
* ಡಿಸೆಂಬರ್ 28ರಂದು ಸಂಜೆ 6.30 ರಿಂದ ನೃತ್ಯಾಂಕುರ ಕಲಾತಂಡ, ಮಂಗಳ ಗಂಗೋತ್ರಿ ವತಿಯಿಂದ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮಗಳು ನಡೆಯಲಿದೆ. ಜೊತೆಗೆ ಮಕ್ಕಳ ಬ್ಯಾಂಡ್(ಸರಿಗಮಪ ಬಳಗ) ಮಧುರ ಗೀತೆಗಳ ಮೂಲಕ ಪ್ರೇಕ್ಷಕರನ್ನ ರಂಜಿಸಲಿದೆ.
* ಡಿಸೆಂಬರ್ 29ರಂದು ಸಂಜೆ 6.30 ರಿಂದ ಕುದ್ರೋಳಿ ಗಣೇಶ್ ಮತ್ತು ತಂಡದಿಂದ ವಿಸ್ಮಯ ಜಾದೂ ಕಾರ್ಯಕ್ರಮ ನಡೆಯಲಿದೆ.
* ಡಿಸೆಂಬರ್ 30ರಂದು ಸಂಜೆ 6.30 ರಿಂದ ಅರೆಹೊಳೆ ಪ್ರತಿಷ್ಠಾನ- ನಂದಗೋಕುಲ ವತಿಯಿಂದ ನೃತ್ಯರೂಪಕ ಕಾರ್ಯಕ್ರಮ ನಡೆಯಲಿದೆ.
ಕರಾವಳಿ ಉತ್ಸವದ ಸಮಯದಲ್ಲಿ ನಿಗದಿಪಡಿಸಲಾದ ಇತರ ಕಾರ್ಯಕ್ರಮಗಳು:
* ಡಿಸೆಂಬರ್ 21-31: ಮೇರಿಹಿಲ್ ಹೆಲಿಪ್ಯಾಡ್ನಲ್ಲಿ ಹೆಲಿಟ್ಯಾಕ್ಸಿ ರೈಡ್ಗಳು (ಒಬ್ಬರಿಗೆ 4,500 ರೂ.)
* ಡಿಸೆಂಬರ್ 28-29: ತಣ್ಣೀರಭಾವಿ ಬೀಚ್ನಲ್ಲಿ ಎರಡು ದಿನಗಳ ಬೀಚ್ ಉತ್ಸವ
* ಡಿಸೆಂಬರ್ 22-ಜನವರಿ 19: ಕದ್ರಿ ಪಾರ್ಕ್ ನಲ್ಲಿ ರೋಬೋಟಿಕ್ ಬಟರ್ಫ್ಲೈ ಪ್ರದರ್ಶನ (ಸಂಜೆ 4ರಿಂದ ರಾತ್ರಿ 9ರವರೆಗೆ)
* ಜನವರಿ 4-5: ಕದ್ರಿ ಪಾರ್ಕ್ ನಲ್ಲಿ ಆಟೋಮೊಬೈಲ್ ಮತ್ತು ಶ್ವಾನ ಪ್ರದರ್ಶನ
* ಜನವರಿ 11-12: ಕದ್ರಿ ಪಾರ್ಕ್ ನಲ್ಲಿ ಯುವ ಉತ್ಸವ - ಯುವಕರ ಭಾಗವಹಿಸುವಿಕೆಯನ್ನು ಉತ್ತೇಜಿಸುವುದು
* ಜನವರಿ 18-19: ತಣ್ಣೀರಭಾವಿ ಬೀಚ್ನಲ್ಲಿ ಅಂತರಾಷ್ಟ್ರೀಯ ಗಾಳಿಪಟ ಉತ್ಸವ