ಕುಂದಾಪುರ, ಡಿ.23(DaijiworldNews/AK):ಇಲ್ಲಿನ ಹೊರವಲಯದಲ್ಲಿರುವ ಕೋಟೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಹೈಸ್ಕೂಲ್ ವಿಭಾಗದ ಗೇಟ್ ಗೆ ತಾಗಿಕೊಂಡೇ ಇರುವ ಟಯರ್ ರಿಪೇರಿ ಅಂಗಡಿಯ ಎತ್ತಂಗಡಿಗೆ ಹಲವು ಮನವಿ, ಆಗ್ರಹಗಳ ನಡುವೆಯೂ ಕಾರ್ಯನಿರ್ವಹಿಸುತ್ತಿದ್ದು, ಶನಿವಾರ ಬೆಳಿಗ್ಗೆ ಅಪಾಯಕಾರಿ ರೀತಿಯಲ್ಲಿ ಟಯರ್ ಸ್ಪೋಟಗೊಂಡಿದೆ.
ಆದರೆ ಅದಾಗಲೇ ಶಾಲೆ ಆರಂಭಗೊಂಡ ಹಿನ್ನೆಲೆಯಲ್ಲಿ ಸಂಭವನೀಯ ದುರಂತ ತಪ್ಪಿದೆ. ಕೋಟೇಶ್ವರದ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಗೇಟ್ ಪಕ್ಕದಲ್ಲಿಯೇ ಈ ಟಯರ್ ಅಂಗಡಿಯಿದ್ದು, ಕೋಟೇಶ್ವರ ಪ್ರಾಥಮಿಕ, ಪ್ರೌಢ ಶಾಲೆ ಹಾಗೂ ಪಿಯು ಕಾಲೇಜಿನ ಸಾವಿರಾರು ವಿದ್ಯಾರ್ಥಿಗಳು ದಿನನಿತ್ಯ ಇದೇ ಗೇಟ್ ನಲ್ಲಿ, ಇದೇ ಅಂಗಡಿ ಎದುರು ಹಾದು ಬರಬೇಕಾಗಿದೆ. ವಿದ್ಯಾರ್ಥಿಗಳು ಸಂಚರಿಸುವಾಗ ಈ ತರ ಸಾಧ್ಯತೆಗಳಿದ್ದು, ಈ ಹಿಂದೆಯೇ ಹಲವಾರು ಬಾರಿ ಅಂಗಡಿ ಸ್ಥಳಾಂತರಕ್ಕೆ ಆಗ್ರಹಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಮಾಜಸೇವಕ ಲೋಕೆಶ್ ಅಂಕದಕಟ್ಟೆ ಆರೋಪಿಸಿದ್ದಾರೆ.
ಸ್ಪೋಟದ ಘಟನೆ ಸಿರಾಜುದ್ದೀನ್ ಎಂಬುವರ ಹೆಸರಿನಲ್ಲಿರುವ ಅಂಗಡಿಯ ಸಿಸಿಟಿವಿ ಕ್ಯಾಮಾರಾದಲ್ಲಿ ರೆಕಾರ್ಡ್ ಆಗಿದ್ದು, ಎಲ್ಲೆಡೆ ವೈರಲ್ ಆಗುತ್ತಿದೆ. ಇನ್ನಾದರೂ ಸಂಬಂಧ ಪಟ್ಟ ಇಲಾಖೆಯವರು, ಅಧಿಕಾರಿಗಳು ಕೂಡಲೇ ಈ ಪ್ರಕರಣಕ್ಕೆ ಸೂಕ್ತ ಕ್ರಮ ಕೈಗೊಳ್ಳುತ್ತಾರೆಯೇ ಕಾದು ನೋಡಬೇಕಿದೆ.