ಕಾಸರಗೋಡು, ಡಿ.23(DaijiworldNews/AA): ಅಸ್ಸಾಂ ಸ್ಪೆಷಲ್ ಟಾಸ್ಕ್ ಫೋರ್ಸ್ ಪೊಲೀಸರು ಕಾಸರಗೋಡಿನ ಪಡನ್ನಕ್ಕಾಡ್ನಲ್ಲಿ ಬಂಧಿಸಿದ್ದ ಬಾಂಗ್ಲಾ ಪ್ರಜೆ ಎಂ.ಡಿ.ಶಾಬ್ ಶೇಖ್ ಅಲ್ ಖೈದ ಉಗ್ರರ ಸ್ಲೀಪರ್ ಸೆಲ್ ಸದಸ್ಯನಾಗಿ ಕಾರ್ಯ ನಿರ್ವಹಿಸುತ್ತಿದ್ದ ಎಂಬ ಮಾಹಿತಿ ತನಿಖಾ ತಂಡಕ್ಕೆ ದೊರೆತಿದೆ.
ಈತ ಬಾಂಗ್ಲಾದೇಶದ ಉಗ್ರಗಾಮಿ ಸಂಘಟನೆಯಾದ ಅನ್ಸಾರುಲ್ಲ ಬಾಂಗ್ಲಾದ ಸಕ್ರಿಯ ಕಾರ್ಯಕರ್ತನಾಗಿದ್ದು, ಭಾರತದಲ್ಲಿ ಸ್ಪೀಪರ ಸೆಲ್ ರಚಿಸಿ, ಹಿಂದೂ ನಾಯಕರನ್ನು ಹತ್ಯೆಗೈಯುವ ಸಂಚು ರೂಪಿಸಿದ್ದ ಎಂದು ತನಿಖಾ ತಂಡ ಪತ್ತೆಹಚ್ಚಿದೆ. ಈತ 2018ರಿಂದ ಕಾಸರಗೋಡು ಕೇಂದ್ರೀಕರಿಸಿ ಕಾರ್ಯಾಚರಿಸುತ್ತಿದ್ದ ಎನ್ನಲಾಗಿದೆ.
ಅಸ್ಸಾಂನಲ್ಲಿ ಹಲವು ಬಾಂಬ್ ಸ್ಫೋಟ ಪ್ರಕರಣಗಳಲ್ಲಿ ಆರೋಪಿಯಾಗಿರುವ ಈತ ಕಟ್ಟಡ ನಿರ್ಮಾಣ ಕಾರ್ಮಿಕನೆಂದು ನಕಲಿ ದಾಖಲೆಯೊಂದಿಗೆ ಕಾಸರಗೋಡಿಗೆ ಆಗಮಿಸಿದ್ದ. ನಕಲಿ ದಾಖಲೆ ಬಳಸಿ ರಾಷ್ಟ್ರೀಕೃತ ಬ್ಯಾಂಕೊಂದರಲ್ಲಿ ಖಾತೆ ತೆರೆದಿದ್ದು, ಈತನಿಗೆ ಸಹಾಯ ಮಾಡಿದವರ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಭಾರತದಲ್ಲಿ ಉಗ್ರಗಾಮಿ ಚಟುವಟಿಕೆ ಸಕ್ರಿಯಗೊಳಿಸಲು ಹಾಗೂ ಸ್ಲೀಪರ್ ಸೆಲ್ಗಳನ್ನು ರಚಿಸಲೆಂದೇ ಈತನನ್ನು ಆತನ ಸಂಘಟನೆ ಕಳುಹಿಸಿತ್ತು. ಇದೇ ವೇಳೆ ಅಸ್ಸಾಂ ಟಾಸ್ಕ್ ಫೋರ್ಸ್ ಉಗ್ರ ಚಟುವಟಿಕೆ ಆರೋಪದಲ್ಲಿ ಅಸ್ಸಾಂನಿಂದ ಐವರು ಹಾಗೂ ಪಶ್ಚಿಮ ಬಂಗಾಲದಲ್ಲಿ ಇಬ್ಬರನ್ನು ಬಂಧಿಸಿದೆ. ಇವರೆಲ್ಲರೂ ಹಿಂದೂ ನಾಯಕರನ್ನು ಹತ್ಯೆ ಮಾಡುವ ಉದ್ದೇಶವನ್ನ ಹೊಂದಿದ್ದರು ಎಂದು ತನಿಖೆ ಮೂಲಕ ತಿಳಿದುಬಂದಿದೆ.