ಕುಂದಾಪುರ, ಡಿ.23(DaijiworldNews/AA): ಸಾಸ್ತಾನ ಟೋಲ್ನಲ್ಲಿ ಸ್ಥಳೀಯ ವಾಣಿಜ್ಯ ವಾಹನಗಳಿಗೆ ಟೋಲ್ ವಿಧಿಸುವುದನ್ನು ಖಂಡಿಸಿ ಭಾನುವಾರ ಹೆದ್ದಾರಿ ಜಾಗೃತಿ ಸಮಿತಿ ನೇತೃತ್ವದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಉಪಸ್ಥಿತಿಯಲ್ಲಿ ಪ್ರತಿಭಟನೆ ನಡೆದಿದ್ದು, ಡಿ. 30ರ ವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚನೆ ನೀಡಲಾಯಿತು.
ಸ್ಥಳೀಯ ವಾಣಿಜ್ಯ ವಾಹನಗಳಿಗೆ ಶುಲ್ಕ ವಿಧಿಸುವುದರಿಂದ ಸ್ಥಳೀಯರಿಗೆ ಸಾಕಷ್ಟು ತೊಂದರೆಯಾಗುತ್ತಿದ್ದು, ನಿರ್ಣಯವನ್ನು ಹಿಂಪಡೆದು ಹಿಂದಿನಂತೆ ಕೋಟ ಜಿ.ಪಂ. ಕ್ಷೇತ್ರ ವ್ಯಾಪ್ತಿಯ ಎಲ್ಲ ವಾಹನಗಳಿಗೆ ವಿನಾಯಿತಿ ನೀಡಬೇಕು ಎಂದು ಆಗ್ರಹಿಸಿ ಟೋಲ್ನ ಎರಡು ಸ್ಥಳೀಯ ಗೇಟ್ಗಳನ್ನು ತಡೆದು ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಕುಂದಾಪುರ ಸಹಾಯಕ ಕಮಿಷನರ್ ಮಹೇಶ್ಚಂದ್ರ ಆಗಮಿಸಿ ಪ್ರತಿಭಟನಾ ನಿರತರು ಹಾಗೂ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರೊಂದಿಗೆ ಮಾತುಕತೆ ನಡೆಸಿದರು. ಬಳಿಕ ಡಿ. 30ರಂದು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಲು ಹಾಗೂ ಅಲ್ಲಿಯವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳಲು ನಿರ್ಧಾರ ಕೈಗೊಳ್ಳಲಾಯಿತು.
ಟೋಲ್ನ ಎರಡೂ ಕಡೆ ಸ್ಥಳೀಯ ವಾಹನಗಳಿಗೆ ಸರ್ವಿಸ್ ರಸ್ತೆ ನಿರ್ಮಿಸಿ ಕೊಡಬೇಕೆಂಬ ನಿಯಮವಿದೆ. ಆದರೆ ಕಂಪೆನಿ ಈ ನಿಯಮವನ್ನು ಪಾಲಿಸಿಲ್ಲ. ಸ್ಥಳೀಯರಿಗೆ ವಿನಾಯಿತಿ ನೀಡದಿದ್ದರೆ ಸರ್ವಿಸ್ ರಸ್ತೆ ನಿರ್ಮಿಸಿಕೊಡುವಂತೆ ಬೇಡಿಕೆ ಸಲ್ಲಿಸಲಾಗುವುದು ಎಂದು ಸಂಸದರು ಹೇಳಿದರು.
ಪ್ರತಿಭಟನೆಯಲ್ಲಿ ಹೆದ್ದಾರಿ ಜಾಗೃತಿ ಸಮಿತಿ ಪ್ರಮುಖರಾದ ಶ್ಯಾಮ್ ಸುಂದರ್ ನಾಯರಿ, ಪ್ರತಾಪ್ ಶೆಟ್ಟಿ, ವಿಟ್ಠಲ ಪೂಜಾರಿ, ನಾಗರಾಜ್ ಗಾಣಿಗ, ಪೂಜಾರಿ, ಗಣೇಶ್ ಪೂಜಾರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ ಕುಂದರ್, ಯಶಪಾಲ್ ಸುವರ್ಣ ಭಾಗವಹಿಸಿದ್ದರು. ಬ್ರಹ್ಮಾವರ ಸಿಐ ದಿವಾಕರ್, ಕೋಟ ಎಸ್ಐ ರಾಘವೇಂದ್ರ ಸ್ಥಳದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಿದ್ದರು.