ಉಡುಪಿ, ಜೂ 8 (Daijiworld News/MSP): ಕಿದಿಯೂರು ಹೊಟೇಲ್ ವಾಹನ ನಿಲುಗಡೆ ಪ್ರಾಂಗಣದಲ್ಲಿ ಮಳೆಗಾಗಿ ಮಂಡೂರಾಯನ ವಿವಾಹ ಮಹೋತ್ಸವ ಸಂಪನ್ನಗೊಂಡಿದೆ.
ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ಮತ್ತು ಪಂಚರತ್ನಾ ಸೇವಾ ಟ್ರಸ್ಟ್ ಮಳೆ ಬರಲೆಂದು ಈ ಬಾರಿಯ ಕಪ್ಪೆ ಮದುವೆ ಆಯೋಜನೆ ಮಾಡಿತ್ತು. ಜೂ.8ರ ಮಧ್ಯಾಹ್ನ ಗಂಡು ಹಾಗೂ ಹೆಣ್ಣು ಕಪ್ಪೆಯನ್ನು ತ್ರಿಚಕ್ರ ಸೈಕಲ್ ನಲ್ಲಿ ಕೂರಿಸಿ ಮಾರುತಿ ವಿಥಿಕಾ ನಾಗರಿಕ ಸಮಿತಿಯ ಕಚೇರಿಯಿಂದ ಕಿದಿಯೂರು ಹೋಟೆಲ್ ವಾಹನ ನಿಲುಗಡೆ ಪ್ರಾಂಗಣದವರೆಗೆ ಮೆರವಣಿಗೆ ಮಾಡಿ , ಹೆಣ್ಣು ಕಪ್ಪೆಗೆ ‘ವರ್ಷಾ’ ಹಾಗೂ ಗಂಡು ಕಪ್ಪೆಗೆ ‘ವರುಣ’ ಎಂದೂ ನಾಮಕರಣ ಮಾಡಿ ಮನುಷ್ಯನ ರೀತಿಯಲ್ಲಿ ಶಾಸ್ತ್ರ ಬದ್ದವಾಗಿ ವಿವಾಹ ಮಾಡಲಾಯಿತು.
ನಿತ್ಯಾನಂದ ಒಳಕಾಡು ಗಂಡು ಕಪ್ಪೆಯನ್ನು , ರಾಜು ಪೂಜಾರಿ ಹೆಣ್ಣುಕಪ್ಪೆಯನ್ನು ಹಿಡಿದುಕೊಂಡಿದ್ದರು. ಹೆಣ್ಣು ಕಪ್ಪೆಗೆ ಕರಿಮಣಿ, ಕಾಲು ಉಂಗುರ, ತೊಡಿಸಿ ಅಮಿತಾ ಗಿರೀಶ್ ಕಪ್ಪೆಗಳಿಗೆ ಆರತಿ ಮಾಡಿದರು. ಮದುವೆಗೆ ಬರುವವರಿಗೆ ಸ್ವಾಗತಿಸಿ, ಒಳಗೆ ಹೋಗಿ ಪಾಲ್ಗೊಳ್ಳಿ ಎಂದು ಅಲ್ಲಿದ್ದವರು ಹೇಳುತ್ತಿದ್ದರು. ಮದುವೆಗಾಗಿ ವಿಶೇಷ ಔತಣವನ್ನು ಸಿದ್ಧಪಡಿಸಲಾಗಿತ್ತು.
ಮರಗಳನ್ನು ಕಡಿಯುವುದರಿಂದ ಪರಿಸರ ಹಾನಿಯಾಗಿದೆ. ಮಳೆಗಾಗಿ ಕಪ್ಪೆ ಮದುವೆ ಮಾಡಿದ್ದೇವೆ. ಹಿಂದೂ ವಿವಾಹ ಸಂಪ್ರದಾಯಂತೆ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು. 'ಕಪ್ಪೆ ವಿವಾಹ' ಮೂಢನಂಬಿಕೆ ಎಂಬ ಟೀಕೆ ಕೇಳಿ ಬರುತ್ತಿದೆ. ಆದರೆ ಸಂಪ್ರದಾಯ ಮತ್ತು ನಂಬಿಕೆಯ ಆಧಾರದಲ್ಲಿ ಈ ಕಾರ್ಯವನ್ನು ಮಾಡಿದ್ದೇವೆ. ನಾವು ಹೆಚ್ಚಾಗಿ ನಂಬಿಕೆಯ ಮೇಲೆಯೇ ಕಷ್ಟಗಳನ್ನು ಪರಿಹರಿಸಿಕೊಳ್ಳುತ್ತೇವೆ. ಜಲಕ್ಷಾಮ ಎದುರಾಗಿದೆ. ಮಳೆ ಬರಲೆಂದು ಈ ಕಾರ್ಯ ಮಾಡಿದ್ದೇವೆ. ಟೀಕಿಸುವವರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ . ಕಪ್ಪೆ ಮದುವೆಗಾಗಿ ಒಟ್ಟು ನಾಲ್ಕು ಕಪ್ಪೆಗಳನ್ನು ಹಿಡಿಯಲಾಗಿತ್ತು, ಮಣಿಪಾಲದ ಜೀವಶಾಸ್ತ್ರ ತಜ್ಞರು ಹೆಣ್ಣು ಹಾಗೂ ಗಂಡು ಕಪ್ಪೆಯನ್ನು ಗುರುತಿಸಿದ್ದರು. ಉಳಿದ ಕಪ್ಪೆಗಳನ್ನು 'ಮಣ್ಣಪಲ್ಲ ಸರೋವರ'ಕ್ಕೆ ವಾಪಾಸ್ ಬಿಡಲಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ತಾರಾನಾಥ ಮೇಸ್ತ ಹೇಳಿದರು.