ನವದೆಹಲಿ, ಡಿ 2: ಮುಸ್ಲಿಂ ಸಮುದಾಯದಲ್ಲಿ ವಿವಾಹ ವಿಚ್ಛೇದನಕ್ಕೆ ಬಳಕೆಯಾಗುತ್ತಿರುವ ತ್ರಿವಳಿ ತಲಾಖ್ ಏಕಕಾಲದಲ್ಲಿ ನೀಡುವುದು ಕಾನೂನುಬಾಹಿರವಾಗಿದ್ದು, ತಲಾಖ್ ಹೇಳುವ ವ್ಯಕ್ತಿಗೆ 3 ವರ್ಷಗಳ ಜೈಲು ಶಿಕ್ಷೆ ಖಚಿತ ಎಂದು ಮಸೂದೆಯಲ್ಲಿ ಹೇಳಲಾಗಿದೆ.
ಮುಸ್ಲಿಂ ಸಮುದಾಯದಲ್ಲಿರುವ ಮೂರು ಬಾರಿ ತಲಾಖ್ ಹೇಳುವ ಪದ್ಧತಿಯನ್ನು ನಿಷೇಧಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಾನೂನು ತರಲು ಇದೀಗ ಕರಡು ಸಿದ್ಧಪಡಿಸಿದೆ. ತ್ರಿವಳಿ ತಲಾಖ್ ಪದ್ಧತಿಯನ್ನುಸುಪ್ರೀಂ ಕೋರ್ಟ್ ನಿಷೇಧಿಸಿದ್ದರೂ ಮುಂದುವರಿದಿದೆ. ಹೀಗಾಗಿ ತ್ರಿವಳಿ ತಲಾಖ್ ನೀಡುವ ಪತಿಗೆ 3 ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸುವ ಪ್ರಸ್ತಾಪ ಮಸೂದೆಯಲ್ಲಿದೆ.
ಕೇಂದ್ರ ಸರ್ಕಾರವು ವಿವಾಹಕ್ಕೆ ಸಂಬಂಧಿಸಿ ಮುಸ್ಲಿಂ ಮಹಿಳೆಯರ ಹಕ್ಕುಗಳ ರಕ್ಷಣೆ ವಿಧೇಯಕ ಎಂಬ ಹೆಸರಿನ ಈ ಕರಡು ಪ್ರತಿಯನ್ನು ರಾಜ್ಯ ಸರ್ಕಾರಗಳಿಗೆ ಕಳುಹಿಸಿದೆ. ತ್ರಿವಳಿ ತಲಾಖ್ ಒಳಗಾದ ಮಹಿಳೆ ಗಂಡನಿಂದ ಜೀವನಾಂಶ ಪಡೆಯುವುದಕ್ಕೆ ಅವಕಾಶ ಕಲ್ಪಿಸುವ ಪ್ರಸ್ತಾಪವೂ ಈ ಮಸೂದೆಯಲ್ಲಿದ್ದು, ಶೀಘ್ರ ಕಾನೂನು ಜಾರಿ ಮಾಡಲು ಸರ್ಕಾರ ಮುಂದಾಗಿದೆ.
ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ನೇತೃತ್ವದ ಅಂತರ್-ಸಚಿವರ ಸಮಿತಿಯು ಈ ಕರಡು ಸಿದ್ಧಪಡಿಸಿದ್ದು, ಸಚಿವರಾದ ಸುಷ್ಮಾ ಸ್ವರಾಜ್, ಅರುಣ್ ಜೇಟಿÉ, ರವಿಶಂಕರ್ ಪ್ರಸಾದ್ ಮತ್ತು ಪಿ.ಪಿ. ಚೌಧರಿ ಸಮಿತಿಯಲ್ಲಿ ಇದ್ದರು.