ಉಡುಪಿ, ಜೂ 07: (Daijiworld News/SM): ಮಾಧ್ಯಮಗಳಿಗೆ ಹೇಳಿಕೆ, ಸ್ಪಷ್ಟನೆ ಕೊಡಲು ಸಾಧ್ಯವಾದರೆ ಮಾತ್ರ ಕೊಡಿ. ಎಲ್ಲಾ ಮಾಧ್ಯಮಗಳು ನಿಮ್ಮ ಚಾನೆಲ್ಗಳಲ್ಲ. ನೀವು ಹೇಳಿದ್ದನ್ನೆಲ್ಲಾ ಕೇಳಬೇಕು, ಹಾಕಬೇಕು ಎಂದರೆ ಆಗಲ್ಲ ಎಂದು ಸಿ.ಎಂ ಕುಮಾರಸ್ವಾಮಿ ಅವರ ಮಾಧ್ಯಮಗಳ ವಿರುದ್ಧದ ನಡವಳಿಕೆ ಬಗ್ಗೆ ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ್ ಪೂಜಾರಿ ಕಿಡಿಕಾರಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಅವರು ಮಾಧ್ಯಮಗಳು ಸಮಾಜದ ಲೋಪದೋಷ ತಿದ್ದುವ ಕೆಲಸ ಮಾಡುತ್ತವೆ. ಪ್ರಜಾಪ್ರಭುತ್ವದ ಮತ್ತೊಂದು ಅಂಗವೇ ಮಾಧ್ಯಮ. ಹೀಗಾಗಿ ಮಾಧ್ಯಮಗಳು ಸ್ವತಂತ್ರ ಶಕ್ತಿಯಿಂದ ಕೆಲಸ ಮಾಡುತ್ತವೆ. ಸರ್ಕಾರದ ಬಗ್ಗೆ ಟೀಕೆ ಮಾಡಬಾರದು ಎಂಬುದು ಸರಿಯಲ್ಲ ಎಂದರು.
ಟೀಕೆಗಳು ಬಂದರೆ ಸಮರ್ಪಕವಾದ ಉತ್ತರ ಕೊಡಿ ಎಂದು ಮಾಧ್ಯಮಗಳನ್ನು ದೂರ ಇಟ್ಟಿರುವ ಸಿಎಂ ಕುಮಾರಸ್ವಾಮಿ ಅವರಿಗೆ ಕಿವಿ ಮಾತು ನೀಡಿದ್ದಾರೆ.
ಗುರುವಾರ ರಾಮನಗರ ಕ್ಷೇತ್ರಕ್ಕೆ ಅನಿತಾ ಕುಮಾರಸ್ವಾಮಿ ಅವರು ಆಗಮಿಸಿದ್ದಾಗ, ಮಾಧ್ಯಮದವರ ಬಳಿ ಮಾತನಾಡಲು ಏನಿದೆ? ನಮ್ಮ ಕೆಲಸ ಮಾಡಲು ಬಂದಿದ್ದೇವೆ. ಇತ್ತೀಚೆಗೆ ನೀವು ಎಲೆಕ್ಟ್ರಾನಿಕ್ ಮೀಡಿಯಾದವರು ಹಾಳಾಗಿದ್ದೀರಿ. ಇದೇ ವಿಚಾರಕ್ಕೆ ಸಿಎಂ ಕುಮಾರಸ್ವಾಮಿಯವರಿಗೆ ನಿಮ್ಮ ಬಗ್ಗೆ ಬಹಳ ಬೇಸರವಿದೆ. ಇಲ್ಲದೇ ಇರುವ ತಲೆಹರಟೆ ಪ್ರಶ್ನೆ ಕೇಳುತ್ತೀರಿ. ಮಾಧ್ಯಮದವರ ಬಳಿ ಮಾತನಾಡುವ ಅವಶ್ಯಕತೆ ನಮಗಿಲ್ಲ ಎಂದು ಕಿಡಿಕಾರಿದ್ದರು.