ಪುತ್ತೂರು, ಡಿ 1: ಮಾದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು ಇದರ ವಜ್ರಮಹೋತ್ಸವದ ಸಂಭ್ರಮಾಚರಣೆಯ ಪ್ರಯುಕ್ತ ಕಂಡಡೊಂಜಿ ದಿನ ವಿಶೇಷ ಕಾರ್ಯಕ್ರಮ ನಡೆಯಿತು.
ಕಾಲೇಜಿನ ವಿಜ್ಞಾನ ಸಂಘ ಹಾಗೂ ಮಾನವಿಕ ಸಂಘದ ಜಂಟಿ ಆಶ್ರಯದಲ್ಲಿ ನಡೆದ ಕಂಡಡೊಂಜಿ ದಿನ ವಿಶೇಷ ಕಾರ್ಯಕ್ರಮದಲ್ಲಿ ವಿಜ್ಞಾನ ಹಾಗೂ ಕಲಾ ವಿಭಾಗದ ವಿದ್ಯಾರ್ಥಿಗಳಿಗಾಗಿ ವಿಟ್ಲ-ಪಡ್ನೂರು ಕೊಡಂಗಾಯಿ ರಾಜೇಶ್ ಡಿ.ಕೊಟ್ಟಾರಿಯವರ ಗದ್ದೆಯಲ್ಲಿ ದಲ್ಲಿ ವಿದ್ಯಾರ್ಥಿಗಳು ಮೈಮರೆತು ಸಂಪೂರ್ಣವಾಗಿ ಗದ್ದೆಯಲ್ಲಿನ ಕೆಸರಿನೊಂದಿಗೆ ಆಟವಾಡುವ ಕ್ಷಣ ರೋಮಾಂಚನವೆನಿಸಿತ್ತು.
ಕಾಲೇಜಿನ ಪ್ರಾಂಶುಪಾಲರಾದ ವಂ. ವಿಜಯ್ ಲೋಬೋರವರು ಹಿಂಗಾರವನ್ನು ಅರಳಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಹಿಂದೆ ಹಿರಿಯರು ಗದ್ದೆಗಳಲ್ಲಿ ಬೇಸಾಯ, ಕೃಷಿ ಮಾಡುತ್ತಾ ಆರೋಗ್ಯವನ್ನು ಕಾಪಾಡಿಕೊಳ್ಳುತ್ತಿದ್ದರು. ಆದರೆ ಇಂದಿನ ವಾಟ್ಸಫ್ ಯುಗದಲ್ಲಿ ಮನುಷ್ಯ ಸಿರಿತನವನ್ನು ಅನುಭವಿಸಬೇಕು, ದುಡಿಯದೆ ಸಾಕಷ್ಟು ಹಣವನ್ನು ಗಳಿಸಬೇಕು ಎನ್ನುತ್ತಾ ಸ್ವಾರ್ಥಿಯಾಗಿ ಜೀವನಕ್ಕೆ ಸಹಕಾರಿಯಾಗುತ್ತಿದ್ದ ಗದ್ದೆಗಳಲ್ಲಿ ಕಟ್ಟಡಗಳನ್ನು ನಿರ್ಮಿಸಿ ಮಾನವ ನಿರ್ಮಿತ ದುಷ್ಪರಿಣಾಮಕ್ಕೆ ಕಾರಣವಾಗಿದ್ದಾನೆ ಎಂದು ಹೇಳಿದರು.
ಇಂದಿನ ಯುವ ಸಮೂಹಕ್ಕೆ ಹಿಂದಿನ ಗದ್ದೆಗಳ ಸಂಸ್ಕೃತಿ ಬಗ್ಗೆ ಎಳ್ಳಷ್ಟು ಮಾಹಿತಿಯಿಲ್ಲ. ಈ ನಿಟ್ಟಿನಲ್ಲಿ ಇಂದಿನ ಯುವ ಸಮೂಹಕ್ಕೆ ಗದ್ದೆ ಕೃಷಿ ಎಷ್ಟು ಪ್ರಯೋಜನಕಾರಿ ಎಂಬುದಕ್ಕೆ ಕಾಲೇಜಿನ ವಿಜ್ಞಾನ ಸಂಘ ಹಾಗೂ ಮಾನವಿಕ ಸಂಘದವರು ಒಂದು ದಿನದ ಈ ಕಾರ್ಯಕ್ರಮ ಏರ್ಪಡಿಸಿದ್ದು ಶ್ಲಾಘನೀಯ ಎಂದರು.
100 ಮೀ ಓಟ, ಹಗ್ಗ-ಜಗ್ಗಾಟ, ಉಪ್ಪು ಮೂಟೆ, ಮೂರು ಕಾಲು ಓಟ, ನಿಂಬೆ-ಚಮಚ ನಡೆತ, ಬಲೂನ್ ಸ್ಪರ್ಧೆ, ಹಾಳೆ ಎಳೆತ, ಲಕ್ಕಿ ಗೇಮ್ಸ್ ಸ್ಪರ್ಧೆ, ಉಪನ್ಯಾಸಕರುಗಳಿಗೆ 100 ಮೀ.ಓಟ ಹಾಗೂ ಹಗ್ಗ-ಜಗ್ಗಾಟವನ್ನು ಏರ್ಪಡಿಸಲಾಗಿತ್ತು. ಕೃಷಿ ಪರಂಪರೆ, ಹಳ್ಳಿಯ ಸೊಬಗು, ಜೀವನ ಶೈಲಿ, ಕೃಷಿ ಚಟುವಟಿಕೆಗಳಿಗೆ ಆದ್ಯತೆ ಹಾಗೂ ವಿದ್ಯಾರ್ಥಿಗಳಿಗೆ ಅದರ ವಿಶೇಷತೆಯನ್ನು ಮನದಟ್ಟು ಮಾಡಿ ಕೊಡುವ ನಿಟ್ಟಿನಲ್ಲಿ ಕೆಸರು ಗದ್ದೆಯಲ್ಲಿ ವಿವಿಧ ಮನೋರಂಜನಾ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಮಧ್ಯಾಹ್ನದ ಭೋಜನವಾಗಿ ಗಂಜಿ-ಚಟ್ನಿ, ಮಜ್ಜಿಗೆ ಹಾಗೂ ನಾಟಿ ಕೋಳಿ ಖಾದ್ಯ ಕಾರ್ಯಕ್ರಮದ ವಿಶೇಷತೆಯಾಗಿತ್ತು.