ಮಂಗಳೂರು, ಜೂ 07 (Daijiworld News/MSP): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜೂನ್ 5ರಂದು ರಾತ್ರಿ ಮಳೆಯಾದ ಕಾರಣ ತುಂಬೆ ಅಣೆಕಟ್ಟಿನಲ್ಲಿ ನೀರಿನ ಮಟ್ಟ 14 ಸೆಂ. ಮೀಟರ್ ಹೆಚ್ಚಳವಾಗಿದ್ದು ತುಂಬೆ ಡ್ಯಾಂ ನಲ್ಲಿ ಒಟ್ಟು ನೀರಿನ ಮಟ್ಟ 2.24 ಮೀಗೆ ಏರಿದೆ .
ನೀರಿನ ಮಟ್ಟ ಏರಿಕೆಯಾಗುತ್ತಿರುವಂತೆ ನೀರಿನ ಪಡಿತರ ಪದ್ಧತಿಯನ್ನು ಪರಿಷ್ಕರಿಸಿ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಬಿ.ಎಚ್.ನಾರಾಯಣಪ್ಪ ಗುರುವಾರ ಆದೇಶ ಹೊರಡಿಸಿದ್ದಾರೆ.
ಜೂ.6ರಿಂದ 9ರ ತನಕ ನೀರು ಪೂರೈಕೆ ಸ್ಥಗಿತಗೊಳಿಸುವ ಆದೇಶ ಬದಲಾಯಿಸಿ ಜೂ.8ರ ಬೆಳಗ್ಗೆ 6 ಗಂಟೆಯಿಂದ ಜೂ.12ರ ಬೆಳಗ್ಗೆ 6 ಗಂಟೆ ತನಕ 96 ಗಂಟೆಗಳ ಅವಧಿಯಲ್ಲಿ ನೀರು ಸರಬರಾಜು ಮಾಡಲಾಗುವುದು. ಮನಪಾ ವ್ಯಾಪ್ತಿಯ ಎಲ್ಲ ವಾರ್ಡ್ಗಳಿಗೆ ಈ ಹಿಂದೆ ಪೂರೈಕೆ ಮಾಡುತ್ತಿರುವ ರೀತಿಯಲ್ಲಿ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗಿದೆ.
ಸಾರ್ವಜನಿಕರು ತಮ್ಮ ಮನೆಗಳಲ್ಲಿರುವ ಕೈ ತೋಟಗಳಿಗೆ, ವಾಹನ ತೊಳೆಯಲು, ಇನ್ನಿತರ ಕೆಲಸಗಳಿಗೆ ಕುಡಿಯುವ ನೀರನ್ನು ಬಳಸಬಾರದು ಹಾಗೂ ನೀರನ್ನು ಪೋಲು ಮಾಡದೆ ಮಿತವಾಗಿ ಬಳಸಿ ಪಾಲಿಕೆಯೊಂದಿಗೆ ಸಹಕರಿಸುವಂತೆ ಆಯುಕ್ತರು ಕೋರಿದ್ದಾರೆ.