ಕಡಬ, ಜೂ 07 (Daijiworld News/MSP): ಕೋಡಿಂಬಾಳ ಗ್ರಾಮದಲ್ಲಿ ಅಕ್ರಮ ಮರಳುಗಾರಿಕೆಯ ಲಾರಿ ಎಂಬ ಶಂಕೆಯಲ್ಲಿ ಅಧಿಕೃತ ಅನುಮತಿ ಪಡೆದಿರುವ ಜಾಗದಿಂದ ಮರಳು ಸಾಗಿಸುತ್ತಿದ್ದ ಲಾರಿಗಳನ್ನು ಗ್ರಾಮಸ್ಥರು ತಡೆದು ನಿಲ್ಲಿಸಿದ ಘಟನೆ ಗುರುವಾರ ನಡೆದಿದೆ.
ಲೋಕೋಪಯೋಗಿ ಇಲಾಖೆಯ ಅಧಿಕೃತ ಅನುಮತಿ ಪಡೆದು ಕುಮಾರಧಾರಾ ನದಿಯಿಂದ ಬಳ್ಪ ಗ್ರಾಮದ ಕೇನ್ಯ ಸೈಟಿನಿಂದ ಮರಳು ಸಾಗಾಟ ನಡೆಸುತ್ತಿದ್ದ 3 ಲಾರಿಗಳನ್ನು ಆಕ್ರಮವಾಗಿ ಮರಳು ಸಾಗಿಸಲಾಗುತ್ತಿದೆ ಎಂದು ಸ್ಥಳೀಯರು ತಡೆದು ನಿಲ್ಲಿಸಿದ್ದರು. ಸ್ಥಳಕ್ಕೆ ತಹಶೀಲ್ದಾರ್ ಜಾನ್ ಪ್ರಕಾಶ್ ರೋಡ್ರಿಗಸ್ ಹಾಗೂ ಕಂದಾಯ ಅಧಿಕಾರಿಗಳು ಭೇಟಿ ನೀಡಿ ನಾಗರೀಕರಲ್ಲಿ ಮನವಿ ಮಾಡಿದರೂ ಒಪ್ಪದೆ ಹೋದಾಗ ಗಣಿ ಇಲಾಕೆ ಅಧಿಕಾರಿಗಳು ಸ್ಥಳಕ್ಕೆ ಬರಬೇಕಾಯಿತು. ಸಂಜೆಯ ವೇಳೆಗೆ ಗಣಿ ಇಲಾಖೆಯ ಅಧಿಕಾರಿ ಸುಷ್ಮಾ ಅವರು ಸ್ಥಳಕ್ಕೆ ಬಂದರು.
ಈ ಸಂದರ್ಭದಲ್ಲಿ ಸ್ಥಳೀಯರು ನಮಗೆ ಸ್ಥಳೀಯವಾಗಿ ಉಪಯೋಗಿ ಪಿಕ್ಅಪ್ ಹಾಗೂ ಸಣ್ಣ ವಾಹನಗಳಲ್ಲಿ ಮರಳು ಸಾಗಾಟ ಮಾಡಲು ಅವಕಾಶ ನೀಡಬೇಕು ಎಂದು ಅಗ್ರಹಿಸಿದರು.
ಗಣಿ ಇಲಾಖಾಧಿಕಾರಿಗಳು ಗ್ರಾಮ ಸ್ಥರು ತಡೆದು ನಿಲ್ಲಿಸಿರುವ ಮರಳು ಲಾರಿಗಳನ್ನು ತಪಾಸಣೆ ನಡೆಸಿದಾಗ ಅವುಗಳು ಲೋಕೋಪಯೋಗಿ ಇಲಾಖೆಯಿಂದ ಅನುಮತಿ ಪಡೆದು ಮರಳು ತೆಗೆದು ಸಾಗಾಟ ಮಾಡುವ ಲಾರಿಗಳು ಎಂದು ತಿಳಿದು ಬಂತು. ಈ ಮರಳುಗಾರಿಕೆ ಕೇವಲ ಸರಕಾರಿ ಕಾಮಗಾರಿಗಳಿಗೆ ಮಾತ್ರ ಬಳಕೆ ಮಾಡಲಾಗುತ್ತಿದೆ. ಬಳ್ಬ ಗ್ರಾಮದಲ್ಲಿ ರಸ್ತೆ ಕಾಮಗಾರಿಯೊಂದು ನಡೆಯುತ್ತಿರುವುದರಿಂದ ಈ ಲಾರಿಗಳು ಕೋಡಿಂಬಾಳ ಮೂಲಕ ಸುಳ್ಯ ಹಾಗೂ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದವು ಎನ್ನುವ ವಿಚಾರ ತಿಳಿಯಿತು. ಆದರೆ ಲಾರಿ ಚಾಲಕರಲ್ಲಿ ಲೋಕೋಪಯೋಗಿ ಇಲಾಖೆ ನೀಡಿರುವ ಸಾಗಾಟ ಅನುಮತಿ ಚೀಟಿ ಇರಲಿಲ್ಲ. ಈ ಕಾರಣಕ್ಕಾಗಿ ೪ ಲಾರಿಗಳ ಪೈಕಿ ಒಂದು ಲಾರಿ ಖಾಲಿ ಇದ್ದುದರಿಂದ ಅದನ್ನು ಬಿಟ್ಟು ಉಳಿದ ೩ ಲಾರಿಗಳನ್ನು ತಹಶೀಲ್ದಾರ್ ಅವರಿಗೆ ಒಪ್ಪಿಸಿ ಸಾಗಾಟ ಅನುಮತಿ ಚೀಟಿ ತೋರಿಸಿ ಲಾರಿಗಳಗಳನ್ನು ಬಿಡಿಸಿಕೊಂಡು ಹೋಗುವಂತೆ ಸುಷ್ಮಾ ಸೂಚಿಸಿದರು.