ಉಡುಪಿ, ಜೂ 6 (Daijiworld News/MSP): ಪರಿಸರ ರಕ್ಷಣೆ ಹಾಗೂ ಜಾಗತಿಕ ಪರಿಸರ ತಾಪಮಾನವನ್ನು ತಗ್ಗಿಸುವ ಉದ್ದೇಶದಿಂದ ಉಡುಪಿ ಜಿಲ್ಲೆಯಲ್ಲಿ ಪ್ರತಿ ಸೋಮವಾರ ಎಲ್ಲಾ ಸರ್ಕಾರಿ ಕಚೇರಿಗಳ ಎಸಿಗಳನ್ನು ಆಫ್ ಮಾಡಿ ಕಾರ್ಯ ನಿರ್ವಹಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದ್ದಾರೆ.
ಅವರು ಗುರುವಾರ, ಸಮೂಹ ಸಾರಿಗೆಯಲ್ಲಿ ತಮ್ಮ ಕಚೇರಿಗೆ ತೆರಳುತ್ತಾ ಮಾತನಾಡಿದರು. ವಿಶ್ವ ಪರಿಸರ ದಿನದ ಅಂಗವಾಗಿ, ಈ ವರ್ಷದ ಘೋಷವಾಕ್ಯ, ವಾಯು ಮಾಲಿನ್ಯ ನಿಯಂತ್ರಣ ಕುರಿತಾಗಿದ್ದು, ಇದನ್ನು ಜಿಲ್ಲೆಯಲ್ಲಿ ಅನುಷ್ಠಾನ ಮಾಡುವ ಕುರಿತಂತೆ ನಡೆದ ಅಧಿಕಾರಿಗಳ ಸಭೆಯಲ್ಲಿ, ಜಿಲ್ಲಾಡಳಿತದ ವತಿಯಿಂದ ಪ್ರತಿ ಸೋಮವಾರ, ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಎಸಿ ಬಳಕೆ ಮಾಡದೇ ಕಾರ್ಯ ನಿರ್ವಹಿಸುವ ಕುರಿತಂತೆ ಎಲ್ಲಾ ಅಧಿಕಾರಿಗಳು ತಮ್ಮ ಒಮ್ಮತ ಸೂಚಿಸಿದ್ದು, ಇದರಿಂದ ವಿದ್ಯುತ್ ಉಳಿತಾಯದ ಜೊತೆಗೆ, ಪರಿಸರದಲ್ಲಿ ಜಾಗತಿಕ ತಾಪಮಾನ ಕಡಿಮೆ ಮಾಡಲು ಜಿಲ್ಲಾಡಳಿತದಿಂದ ಸಾಧ್ಯವಾದ ಪ್ರಯತ್ನ ಮಾಡಲಾಗುತ್ತಿದೆ ಎಂದು ಡಿಸಿ ಹೇಳಿದರು.
ಜಿಲ್ಲೆಯಲ್ಲಿ ಪರಿಸರ ಸಂರಕ್ಷಣೆ ಉದ್ದೇಶದಿಂದ ಈಗಾಗಲೇ ಪ್ರತಿ ಗುರುವಾರ, ಕಚೇರಿಗೆ ಸಮೂಹ ಸಾರಿಗೆಯಲ್ಲಿ ವಿವಿಧ ಅಧಿಕಾರಿಗಳು ಮತ್ತು ಸಿಬ್ಬಂದಿಯೊಂದಿಗೆ ಪ್ರಯಾಣಿಸುವುದರ ಮೂಲಕ ವಾಯು ಮಾಲಿನ್ಯ ನಿಯಂತ್ರಣಕ್ಕೆ, ಸಾಧ್ಯವಾದಷ್ಟು ಕೊಡುಗೆ ನೀಡಲು ನಿರ್ಧರಿಸಿದ್ದು, ಇದೇ ಮಾದರಿಯಲ್ಲಿ ಜಿಲ್ಲೆಯ ವಿವಿಧ ಖಾಸಗಿ ಸಂಸ್ಥೆಗಳು, ಬ್ಯಾಂಕ್ಗಳು, ಕಾರ್ಪೋರೇಟ್ ಸಂಸ್ಥೆಗಳು ತಮ್ಮ ಸಿಬ್ಬಂದಿಗಳಿಗೆ ವಾರದಲ್ಲಿ ಒಂದು ದಿನ ಸಮೂಹ ಸಾರಿಗೆ ವ್ಯವಸ್ಥೆ ಕಲ್ಪಿಸುವುದರ ಮೂಲಕ ಪರಿಸರ ಸಂರಕ್ಷಣೆ ತಮ್ಮದೇ ಆದ ಕೊಡುಗೆ ನೀಡಬಹುದು ಎಂದು ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದರು. ಪರಿಸರ ಸಂರಕ್ಷಣೆ ಉದ್ದೇಶದಿಂದ ಜಿಲ್ಲಾಡಳಿತ ಕೈಗೊಂಡಿರುವ ವಿವಿಧ ರೀತಿಯ ಕ್ರಮಗಳನ್ನು ದಿನನಿತ್ಯದ ಸರಕಾರಿ ಕರ್ತವ್ಯಕ್ಕೆ ಯಾವುದೇ ಅಡಚಣೆಯಾಗದಂತೆ ಅನುಷ್ಠಾನ ಗೊಳಿಸಲಾಗುತ್ತಿದೆ ಎಂದು ಡಿಸಿ ಹೇಳಿದರು.
ಸಮೂಹ ಸಾರಿಗೆಯಲ್ಲಿ ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ, ಕೃಷಿ ಇಲಾಖೆಯ ಉಪ ನಿರ್ದೇಶಕ ಚಂದ್ರಶೇಖರ್ ನಾಯಕ್ ಹಾಗೂ ಜಿಲ್ಲಾಧಿಕಾರಿ ಕಚೇರಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು.