ಕಾರ್ಕಳ, ಜೂ06(Daijiworld News/SS): ಅನಾವಶ್ಯಕವಾಗಿ ನೀರು ಪೋಲಾಗದಂತೆ ಎಚ್ಚರ ವಹಿಸಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ನೀರಿನ ಬಗ್ಗೆ ಜಾಗೃತಿ ಅತ್ಯಗತ್ಯ. ಅನಾವಶ್ಯಕವಾಗಿ ನೀರು ಪೋಲಾಗದಂತೆ ಎಚ್ಚರ ವಹಿಸಬೇಕು. ಅತೀಯಾದ ಬಳಕೆ ಅಪಾಯವನ್ನು ತಂದೊಡ್ಡುತ್ತದೆ. ಪರಿಸರವನ್ನು ಸಂರಕ್ಷಿಸುವ ಜತೆಗೆ ಪುರಾತನವಾದ ಜಲಮೂಲಗಳ ಪುನಶ್ಚೇತನ ಅತ್ಯಗತ್ಯ ಎಂದು
ಕೃಷಿ ಪರಿವರ್ತನೆ ಪರಿಸರ ಪರಿವರ್ತನೆಗೆ ಕಾರಣವಾಗುತ್ತಿದೆ. ಭತ್ತದ ಕೃಷಿಯ ಸಂದರ್ಭಗಳಲ್ಲಿ ಗದ್ದೆಯಲ್ಲಿ ನೀರಿಂಗಿಸುವ ಕೆಲಸವಾಗುತ್ತಿದ್ದರೆ, ಹಲವಾರು ವಾಣಿಜ್ಯ ಬೆಳೆಗಳ ಪರಿಚಯದಿಂದ ಬುಡದಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಲಾಗುತ್ತಿದೆ. ಪರಿಣಾಮ ನಮ್ಮ ಜಿಲ್ಲೆಗಳಲ್ಲೂ ಅಂತರ್ಜಲಮಟ್ಟ ಕುಸಿಯಲಾರಂಭಿಸಿದೆ ಎಂದು ಹೇಳಿದರು.
ಇದೇ ವೇಳೆ ಮಾತನಾಡಿದ ಧರ್ಮಸ್ಥಳದ ಮಾತೃಧಿಶ್ರೀ ಹೇಮಾವತಿ ವಿ. ಹೆಗ್ಗಡೆ, ನಮ್ಮ ತಪ್ಪುಗಳಿಂದ ಅನೇಕ ಕೆರೆಗಳು ಅವಸಾನ ಕಂಡಿದೆ. ನೀರನ್ನು ಬಡವರ ಮನೆಯ ತುಪ್ಪದಂತೆ ಬಳಸಬೇಕು. ಜತೆಗೆ ನೀರಿನ ಬಳಕೆಯಲ್ಲಿ ಇತಿ-ಮಿತಿಯನ್ನು ಕಾಯ್ದುಕೊಳ್ಳಬೇಕು. ಸರಕಾರದ ಅನುದಾನಕ್ಕೆ ಕಾಯದೆ ನಮ್ಮೂರುಗಳಲ್ಲಿ ಸಣ್ಣಪುಟ್ಟ ಕೆರೆಗಳನ್ನು ಅಭಿವೃದ್ದಿಪಡಿಸುವಲ್ಲಿ ಪ್ರತಿಯೊಬ್ಬರೂ ಆಸಕ್ತರಾಗಬೇಕು ಎಂದು ತಿಳಿಸಿದರು.