ಮಂಗಳೂರು, ಜೂ 6 (Daijiworld News/MSP): ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ಖ್ಯಾತ ಛಾಯಾ ಗ್ರಾಹಕ ಜಿನೇಶ್ ಪ್ರಸಾದ್ ಅವರ ಛಾಯಚಿತ್ರವು ಇಟಲಿಯಲ್ಲಿ ಜರುಗಿದ ಇಂಟರ್ನ್ಯಾಷನಲ್ 23° ಗ್ರಾನ್ ಟೂರ್ ಡೆಲ್ ಕಾಲಿನ್ 2019 ಛಾಯಾಗ್ರಹಣ ಸ್ಪರ್ಧೆಯಲ್ಲಿ ಪ್ರತಿಷ್ಠಿತ ಫೋಟೋಗ್ರಾಫಿಕ್ ಸೊಸೈಟಿ ಆಫ್ ಅಮೇರಿಕಾ ಕೊಡಮಾಡುವ ಟ್ರಾವೆಲ್ಸ್ ವಿಭಾಗದಲ್ಲಿ ಮೊದಲ ಬಹುಮಾನ ಪಡೆದಿದ್ದು ಚಿನ್ನದ ಪದಕ ಗಳಿಸಿದ್ದಾರೆ. ಇದರೊಂದಿಗೆ ಬೇರೆ ವಿಭಾಗಗಳಲ್ಲಿ ಎರಡು ಗೌರವ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಈ ಹಿಂದೆ ಬೋಸ್ನಿಯಾ ದೇಶದ ಎರಡು ಬಹುಮಾನಗಳು, ದಕ್ಷಿಣ ಆಫ್ರಿಕಾದ ಒಂದು ಬಹುಮಾನ, ಸರ್ಬಿಯ ದೇಶದ ಒಂದು, ಪುಣೆ ಅಂತರ್ ರಾಷ್ಟ್ರೀಯ ಡಿಜಿಟಲ್ ಫೋಟೋಗ್ರಾಫಿ ಸ್ಪರ್ಧೆಯ ಪದಕ, ಎಂ ಪಾ ಅಂತರ್ ರಾಷ್ಟ್ರೀಯ ಸ್ಪರ್ಧೆಯ ಎರಡು ಪದಕ, ಕಲ್ಕತ್ತಾ ಕ್ರಿಯೆಟಿವ್ ಕ್ಲಬ್ ನ ಎರಡು ಪುರಸ್ಕಾರಗಳು, ಇ.ಪಿ.ಸಿ ರಾಷ್ಟ್ರೀಯ ಸ್ಪರ್ಧೆಯ ಚಿನ್ನದ ಪದಕ ಸೇರಿದಂತೆ 15ಕ್ಕೂ ಹೆಚ್ಚು ಪದಕಗಳನ್ನು 2018 ಸಾಲಿನಲ್ಲಿ ಜಿನೇಶ್ ಪ್ರಸಾದ್ ಅವರು ಗೆದ್ದುಕೊಂಡಿದ್ದರು.