ಉಡುಪಿ, ಜೂ 6 (Daijiworld News/MSP): ಸರ್ಪಸಂಸ್ಕಾರದ ವಿಚಾರವಾಗಿ ಸಂಪುಟ ನರಸಿಂಹ ಸ್ವಾಮಿ ಮಠ ಹಾಗೂ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ನಡುವೆ ತಲೆದೋರಿರುವ ವಿವಾದ ಪರಿಹರಿಸುವ ಸಲುವಾಗಿ ಉಡುಪಿ ಪೇಜಾವರ ಮಠಾಧೀಶರಾದ ಶ್ರೀ ವಿಶ್ವೇಶತೀರ್ಥ ಸ್ಚಾಮೀಜಿ ಮಧ್ಯಸ್ಥಿಕೆ ವಹಿಸುವ ವಿಚಾರವಾಗಿ ಮೊದಲ ಬಾರಿಗೆ ಪೇಜಾವರ ಶ್ರೀ ಪ್ರತಿಕ್ರಿಯಿಸಿದ್ದಾರೆ.
ಈ ವಿಚಾರವಾಗಿ ಉಡುಪಿಯಲ್ಲಿ ಮಾಧ್ಯಮಗಳಿಗೆ ಜೂ. 6 ರ ಗುರುವಾರ ಪ್ರತಿಕ್ರಿಯಿಸಿ ಮಾತನಾಡಿ , ದೇವಸ್ಥಾನ - ಮಠ ಈ ಎರಡು ಧಾರ್ಮಿಕ ಕೇಂದ್ರಗಳ ಮಧ್ಯೆ ಸಂಘರ್ಷ ಇರಬಹುದು. ಜೂ.7 ರ ಶುಕ್ರವಾರ ಮಧ್ಯಾಹ್ನ ನಂತರ ಸುಬ್ರಹ್ಮಣ್ಯಕ್ಕೆ ಭೇಟಿ ನೀಡುತ್ತೇನೆ
ವಿವಾದ ಪರಿಹಾರಕ್ಕೆ ಸಾಧ್ಯವಾದಷ್ಟು ಪ್ರಯತ್ನ ಮಾಡುತ್ತೇನೆ, ಎಲ್ಲರ ಜೊತೆ ಮಾತುಕತೆ ನಡೆಸುತ್ತೇನೆ. ಮಠ ಹಾಗೂ ದೇವಸ್ಥಾನದ ನಡುವೆ ಸಮನ್ವಯ ಸಾಧಿಸಲು ತಿಳಿಸಿ ಮಠ ದೇವಸ್ಥಾನದ ನಡುವೆ ಸೌಹಾರ್ದ ಸಾಮರಸ್ಯ ಬೆಳೆಯಲು ಪ್ರಯತ್ನ ಮಾಡುತ್ತೇನೆ ಎಂದಿದ್ದಾರೆ.
ದೇವಸ್ಥಾನ - ಮಠ ಈ ಎರಡು ಧಾರ್ಮಿಕ ಕೇಂದ್ರಗಳ ನಡುವೆ ಉತ್ತಮ ಬಾಂಧವ್ಯ ಸೃಷ್ಟಿಯಾಗಬೇಕು. ಇದಕ್ಕಾಗಿ ಪೇಜಾವರ ಶ್ರೀಗಳು ಮಧ್ಯ ಪ್ರವೇಶಿಸಬೇಕು ಎನ್ನುವ ಅಭಿಪ್ರಾಯವನ್ನು ಹಿಂದೂ ಸಂಘಟನೆಗಳ ಹಾಗೂ ಮಠದ ಭಕ್ತರು ವ್ಯಕ್ತಪಡಿಸಿದ್ದರು. ಅಲ್ಲದೆ ಈ ಹಿಂದೆ ಮಡೆ ಸ್ನಾನದ ವಿವಾದ ಎದ್ದಾಗ ಶ್ರೀಗಳು ಮಧ್ಯಪ್ರವೇಶಿಸಿ ಯಶಸ್ವಿ ಪರಿಹಾರ ರೂಪಿಸಿದ್ದರು.