ಮಂಗಳೂರು, ಡಿ 1: ನಗರದ ಜನರಿಗೂ ತುಳು ಸಂಸ್ಕೃತಿಯನ್ನು ಪರಿಚಯಿಸುವ ನಿಟ್ಟಿನಲ್ಲಿ ನಗರದ ಕೂಳೂರು ಗೋಲ್ಡ್ ಫಿಂಚ್ ಸಿಟಿಯಲ್ಲಿ ಡಿ. 3 ರಂದು ವೈಭವದ ರಾಮ-ಲಕ್ಷ್ಮಣ ಜೋಡುಕರೆ ಕಂಬಳ ಆಯೋಜಿಸಲಾಗಿದೆ ಎಂದು ಮಂಗಳೂರು ಕಂಬಳ ಸಮಿತಿ ಅಧ್ಯಕ್ಷ ಕ್ಯಾಪ್ಟನ್ ಬ್ರಿಜೇಶ್ ಚೌಟ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಂಬಳ ಜಿಲ್ಲಾ ಸಮಿತಿಯ ಸ್ಪಂದನದ ಮೇರೆಗೆ, ಗೋಲ್ಡ್ ಫಿಂಚ್ ಸಿಟಿ ಮಾಲೀಕ ಪ್ರಕಾಶ್ ಶೆಟ್ಟಿ ಸಹಕಾರದಲ್ಲಿ ಕಂಬಳ ಕರೆ ನಿರ್ಮಾಣ ಮಾಡಲಾಗಿದ್ದು, ಕರೆಗೆ ಇತಿಹಾಸ ಮಹಾಪುರುಷ ರಾಮ-ಲಕ್ಷ್ಮಣ ಕರೆ ಮತ್ತು ಕಾರ್ಯಕ್ರಮದ ವೇದಿಕೆಗೆ ದಿ. ರತ್ನಮಾಧವ ಶೆಟ್ಟಿ ಹೆಸರಿಡಲಾಗಿದೆ ಎಂದು ಹೇಳಿದ್ದಾರೆ.
ಸುಮಾರು 125 ಜೊತೆ ಕೋಣಗಳು ಕಂಬಳದಲ್ಲಿ ಭಾಗವಹಿಸುವ ನಿರೀಕ್ಷೆ ಇದ್ದು, ಒಟ್ಟು 6 ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಸ್ಪರ್ಧೆಯ ನಿಖರ ತೀರ್ಪಿಗಾಗಿ ವೀಡಿಯೋ ದಾಖಲೀಕರಣ ಮತ್ತು ಚಿತ್ರೀಕರಣ ನಡೆಯಲಿದೆ ಎಂದು ಹೇಳಿದರು.
ಮಂಗಳೂರು ಕಂಬಳ ಸಮಿತಿಯ ಗೌರವ ಸಲಹೆಗಾರ ವಿಜಯ್ ಕುಮಾರ್ ಕಂಗಿನ ಮನೆ ಮಾತನಾಡಿ, ಕೂಳೂರಿನಲ್ಲಿ ನಡೆಯಲಿರುವ ಕಂಬಳವು ಗ್ರಾಮೀಣ ಮತ್ತು ನಗರ ಪ್ರದೇಶದ ಜನರನ್ನು ಒಂದು ಕೂಟದಡಿಯಲ್ಲಿ ಸೇರಿಸುವ ಕಂಬಳವಾಗಿದ್ದು, ಇಲ್ಲಿ ಯಾವುದೇ ರೀತಿಯ ಹಿಂಸೆಗೆ ಅವಕಾಶವಿಲ್ಲ ಎಂದು ತಿಳಿಸಿದರು.
ಮುಂದಿನ 10 ವರುಷಗಳ ಕಾಲ ಕೂಳೂರಿನ ಕರೆಯಲ್ಲಿ ಕಂಬಳ ನಡೆಯಲಿರುವುದು. ಈ ಬಗ್ಗೆ ಕಂಬಳ ಸಮಿತಿ ಯೋಜನೆ ಹಾಕಿಕೊಂಡಿದೆ. ಈ ಕರೆಗೆ ಒಟ್ಟು 15 ಲಕ್ಷ ರೂ ಖರ್ಚಾಗಿದ್ದು, ಕೋಣಗಳ ಓಟಕ್ಕೆ ಪೂರಕವಾಗುವ ರೀತಿ ಕರೆಯನ್ನು ನಿರ್ಮಾಣ ಮಾಡಲಾಗಿದೆ ಎಂದು ಹೇಳಿದರು.
ಮಂಗಳೂರು ಕಂಬಳ ಸಮಿತಿಯ ಗೌರವ ಸಲಹೆಗಾರರಾದ ಉಮಾನಾಥ ಕೋಟ್ಯಾನ್, ಕಂಬಳ ಸಮಿತಿಯ ಕಾರ್ಯಾಧ್ಯಕ್ಷ ನಿತಿನ್ ಶೆಟ್ಟಿ, ವಿಜಯಕುಮಾರ್ ಕಂಗಿನಮನೆ, ಪ್ರಸಾದ್ ಕುಮಾರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರವಿಚಂದ್ರ ಪಿ.ಎಂ. ಉಪಾಧ್ಯಕ್ಷರಾದ ಕಿಶೋರ್ ಕುಮಾರ್ ಪುತ್ತೂರು, ವಿನಯ್ ಎಲ್ ಶೆಟ್ಟಿ, ಪ್ರೀತಂ ರೈ, ಸಚಿನ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.