ಮಂಗಳೂರು, ಜೂ 06 (Daijiworld News/MSP): ಕೂಳೂರು ಹಳೆಯ ಸೇತುವೆ ಸಂಚಾರಕ್ಕೆ ಅನರ್ಹಗೊಂಡಿರುವ ಕುರಿತು ವರ್ಷದ ಹಿಂದೆಯೇ ವರದಿ ಬಂದಿದ್ದರೂ, ಹೊಸ ಸೇತುವೆ ನಿರ್ಮಾಣಕ್ಕೆ ಈವರಗೆ ಯಾವ ಸಿದ್ದತೆಗಳನ್ನೂ ಮಾಡದೆ, ಪರ್ಯಾಯ ವ್ಯವಸ್ಥೆಗಳೂ ಇಲ್ಲದೆ ಈಗ ಏಕಾಏಕಿ ಹಳೆಯ ಸೇತುವೆಯಲ್ಲಿ ಪ್ರಯಾಣಿಕ ಸಾರಿಗೆ ಸಹಿತ ಘನವಾಹನಗಳಿಗೆ ನಿಷೇಧ ಹೇರಲು ನಿರ್ಧರಿಸಿರುವುದು ಖಂಡನೀಯ, ಉಳಿದ ಒಂದೇ ಅಗಲ ಕಿರಿದಾದ ಸೇತುವೆಯಲ್ಲಿ ದ್ವಿಮುಖ ಸಂಚಾರದಿಂದ ಈ ಭಾಗದಲ್ಲಿ ವಾಹನ ದಟ್ಟನೆಯಿಂದ ಅರಾಜಕತೆ ಉಂಟಾಗಲಿದ್ದು ಮಂಗಳೂರು, ಸುರತ್ಕಲ್, ಉಡುಪಿ ಮಧ್ಯೆ ಹೆದ್ದಾರಿಯಲ್ಲಿ ಸಂಪರ್ಕವೇ ಕಡಿತಗೊಳ್ಳಲಿದೆ ಎಂದು "ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ, ಸುರತ್ಕಲ್" ಇದರ ಸಂಚಾಲಕ ಮುನೀರ್ ಕಾಟಿಪಳ್ಳ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಳೆದ ವರ್ಷ ಹೆದ್ದಾರಿ ಪ್ರಾಧಿಕಾರ "ಹಳೆಯ ಸೇತುವೆ ದುರ್ಬಲಗೊಂಡಿದೆ, ವಾಹನ ಸಂಚಾರ ನಿಷೇಧಿಸಿ" ಎಂದು ಜಿಲ್ಲಾಡಳಿತಕ್ಕೆ ಸೂಚಿಸಿದಾಗಲೆ, ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಪರ್ಯಾಯ ವ್ಯವಸ್ಥೆಗಳಿಲ್ಲದೆ ಸೇತುವೆ ಮುಚ್ಚುವ ಪ್ರಸ್ಥಾಪವನ್ನು ವಿರೋಧಿಸಿತ್ತು. ತಕ್ಷಣವೇ ಹೊಸ ಸೇತುವೆ ನಿರ್ಮಾಣ ಕೈಗೊಂಡು ವರ್ಷದೊಳಗಡೆ ಪೂರ್ಣಗೊಳಿಸುವಂತೆ ಹೋರಾಟಗಳನ್ನೂ ನಡೆಸಿತ್ತು. ಆ ಸಂದರ್ಭ ಸೇತುವೆಯಲ್ಲಿ ಸಂಚಾರ ನಿರ್ಬಂಧದ ಪ್ರಸ್ಥಾಪವನ್ನು ಮುಂದೂಡಿದ ಹೆದ್ದಾರಿ ಪ್ರಾಧಿಕಾರ ಹಾಗೂ ಜಿಲ್ಲಾಡಳಿತ ಒಂದು ವರ್ಷಗಳ ಕಾಲ ದುರ್ಬಲಗೊಂಡಿರುವ ಹಳೆಯ ಸೇತುವೆಯ ಬದಲಿಯಾಗಿ ಹೊಸ ಸೇತುವೆ ನಿರ್ಮಿಸುವ ಪ್ರಾಥಮಿಕ ಕೆಲಸಗಳನ್ನೂ ಮಾಡದೆ ಕಾಲತಳ್ಳಿದೆ. ಈಗಲೂ ಹೊಸ ಸೇತುವೆ ನಿರ್ಮಾಣದ ನೀಲನಕ್ಷೆಯನ್ನೂ ಸಿದ್ದಪಡಿಸದೆ ಸೇತುವೆ ಮುಚ್ಚಲು ಹೊರಟಿದೆ. ಹೆದ್ದಾರಿ ಪ್ರಾಧಿಕಾರ, ಜಿಲ್ಲಾಡಳಿತದ ಈ ಬೇಜವಾಬ್ದಾರಿ ನಡೆಯನ್ನು ಜನತೆ ಪ್ರಶ್ನಿಸದೇ ಮೌನವಹಿಸಿದರೆ ಕನಿಷ್ಟ ಒಂದು ದಶಕಗಳ ಕಾಲ ಈ ಭಾಗದಲ್ಲಿ ಪ್ರಯಾಣವೇ ಸಾಧ್ಯವಾಗದೆ ಚಿತ್ರಹಿಂಸೆಗೆ ಗುರಿಯಾಗಬೇಕಾಗುತ್ತದೆ. ಮಂಗಳೂರು, ಸುರತ್ಕಲ್, ಉಡುಪಿ ಮಧ್ಯೆಯ ಸಂಚಾರದ ಅವ್ಯವಸ್ಥೆ ಅವಳಿ ಜಿಲ್ಲೆಗಳ ವ್ಯಾಪಾರ, ಉದ್ಯಮ, ಉದ್ಯೋಗ, ಶೈಕ್ಷಣಿಕ ವಲಯಗಳ ಮೇಲೂ ಗಂಭೀರ ಪರಿಣಾಮ ಬೀಳಲಿದ್ದು, ಜನತೆ ಪರಿತಪಿಸುವ ಸ್ಥಿತಿ ನಿರ್ಮಾಣವಾಗಲಿದೆ.
ಮುಂಬೈ, ಕೊಚ್ಚಿನ್, ಬೆಂಗಳೂರಿನಂತಹ ಪ್ರಮುಖ ವಾಣಿಜ್ಯ ಕೇಂದ್ರಗಳನ್ನು ಸಂಪರ್ಕಿಸುವ, ಅದರಲ್ಲೂ ಟೋಲ್ ಸಂಗ್ರಹಿಸುವ ಹೆದ್ದಾರಿಯ ಸೇತುವೆಗಳ ಧಾರಣಾ ಸಾಮರ್ಥ್ಯವನ್ನು ಕಾಲ ಕಾಲಕ್ಕೆ ಪರಿಶೀಲಿಸದೆ, ತೀರಾ ಕುಸಿಯುವ ಭೀತಿ ಎದುರಾಗುವವರೆಗೂ ನಿರಾತಂಕವಾಗಿರುವುದು ಹೆದ್ದಾರಿ ಪ್ರಾಧಿಕಾರದ ಕಾರ್ಯಕ್ಷಮತೆಯ ಕೊರತೆಯನ್ನು ಎತ್ತಿತೋರಿಸುತ್ತದೆ. ಕನಿಷ್ಟ ವರದಿ ಬಂದ ಮೇಲೂ ಹೊಸ ಸೇತುವೆ ನಿರ್ಮಾಣಕ್ಕೆ ಯಾವ ಸಿದ್ದತೆಯನ್ನೂ ಮಾಡಿಕೊಳ್ಳದಿರುವುದು ಕ್ಷಮಿಸಲಾಗದ ವೈಫಲ್ಯ, ಈ ಕುರಿತು ಹಲವು ಹೋರಾಟಗಳು ನಡೆದಿದ್ದರೂ ಮೌನವಾಗಿದ್ದು, ಈಗ ಸಂಚಾರ ನಿಷೇಧಿಸಲು ಹೊರಟಿರುವುದನ್ನು ಯಾವ ಕಾರಣಕ್ಕೂ ಒಪ್ಪಲಾಗದು. ಈ ಎಲ್ಲಾ ಸಮಸ್ಯೆಗಳಿಗೆ ಹೆದ್ದಾರಿ ಪ್ರಾಧಿಕಾರ, ಜಿಲ್ಲಾಡಳಿತದ ಜೊತೆಗೆ ಸಂಸದ ನಳಿನ್ ಕುಮಾರ್ ಕಟೀಲ್ ನೇರಕಾರಣರಾಗಿದ್ದಾರೆ. ಪಂಪ್ ವೆಲ್, ತೊಕ್ಕೊಟ್ಟು ಮೇಲ್ಸೇತುವೆ, ಸುರತ್ಕಲ್ ಅಕ್ರಮ ಟೋಲ್ ಗೇಟ್ ಮುಚ್ಚುವಿಕೆ, ಕೂಳೂರು ಹೊಸ ಸೇತುವೆ ಕುರಿತು ಸತತವಾಗಿ ಸಂಘಟನೆಗಳು ಧ್ವನಿ ಎತ್ತುತ್ತಾ ಬಂದಿದ್ದರೂ, ಹೆದ್ದಾರಿ ಪ್ರಾಧಿಕಾರ, ಕೇಂದ್ರ ಸಾರಿಗೆ ಇಲಾಖೆಗಳ ಕಿವಿ ಹಿಂಡಿ ಸಮಸ್ಯೆ ಪರಿಹರಿಸದೆ, ಸುಳ್ಳು ಭರವಸೆ, ಉನ್ಮಾದಕಾರಿ ಭಾಷಣಗಳಿಂದಲೇ ಜನತೆಯನ್ನು ದಿಕ್ಕುತಪ್ಪಿಸುತ್ತಾ ಬಂದಿದ್ದಾರೆ. ಸಂಸದರ ಇಂತಹ ಅಪ್ರಬುದ್ದ ನಡವಳಿಕೆಗಳೇ ಮಂಗಳೂರು ಉಡುಪಿ ಮಧ್ಯೆಯಲ್ಲಿ ಹೆದ್ದಾರಿ ಸಮಸ್ಯೆಗಳು ಜನಜೀವನವನ್ನೇ ಅಸ್ಥವ್ಯಸ್ಥಗೊಳಿಸತೊಡಗಿದೆ.
ಸಮಸ್ಯೆಗಳು ಏನೆ ಇದ್ದರೂ ಹೊಸ ಸೇತುವೆ ನಿರ್ಮಿಸದೆ, ಹಳೆಯ ಸೇತುವೆಯಲ್ಲಿ ಸಂಚಾರ ನಿರ್ಬಂಧವನ್ನು ಒಪ್ಪಲು ಸಾಧ್ಯವಿಲ್ಲ. ಹೆದ್ದಾರಿ ಪ್ರಾಧಿಕಾರ, ರಾಜ್ಯ ಸರಕಾರ ಸಮರೋಪಾದಿ ಕಾಮಗಾರಿಯ ಮೂಲಕ ಕಾಲಮಿತಿಯೊಳಗಡೆ ಹೊಸ ಸೇತುವೆಯನ್ನು ಕೂಳೂರಿನಲ್ಲಿ ನಿರ್ಮಿಸಬೇಕು. ಅಲ್ಲಿಯವರಗೆ ಹಳೆ ಸೇತುವೆಯನ್ನು ಆಧುನಿಕ ತಂತ್ರಜ್ಞಾನವನ್ನು ಬಳಸಿ ತಾತ್ಕಾಲಿಕ ದುರಸ್ಥಿ ನಡೆಸಿ ಸಂಚಾರಕ್ಕೆ ಯೋಗ್ಯಗೊಳಿಸಬೇಕು. ಅದಲ್ಲದೆ ಹಳೆ ಸೇತುವೆ ಮುಚ್ಚಲು ಹೊರಟು ಅರಾಜಕತೆ ಸೃಷ್ಟಿಸಲು ಮುಂದಾದರೆ ಜನಸಮೂಹವನ್ನು, ಸಂಘಟನೆಗಳನ್ನು ಜೊತೆ ಸೇರಿಸಿ "ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ" ನೇತೃತ್ವದಲ್ಲಿ ಪ್ರಬಲ ಹೋರಾಟವನ್ನು ಸಂಘಟಿಸಲಾಗುವುದು ಎಂದು ಮುನೀರ್ ಕಾಟಿಪಳ್ಳ ಹೆದ್ದಾರಿ ಪ್ರಾಧಿಕಾರ ಹಾಗೂ ಜಿಲ್ಲಾಡಳಿತವನ್ನು ಎಚ್ಚರಿಸಿದ್ದಾರೆ.