ಮಂಗಳೂರು, ಡಿ 1: ನಗರದ ಕಂಕನಾಡಿಯ ಮಾರ್ಕೆಟ್ ಬಳಿಯ ಸಾರ್ವಜನಿಕ ಮೈದಾನದಲ್ಲಿ ಡಿ.21 ರಂದು ಸೌಹಾರ್ದ ಕ್ರಿಸ್ಮಸ್ 2017 ಕಾರ್ಯಕ್ರಮ ನಡೆಯಲಿದೆ ಎಂದು ಕಾರ್ಯಕ್ರಮದ ಸಂಘಟಕರಾದ ಐವನ್ ಡಿಸೋಜಾ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 2 ವರುಷಗಳಿಂದ ಎಲ್ಲಾ ಧರ್ಮಗಳ ಹಬ್ಬಗಳು ಸಾರ್ವಜನಿಕವಾಗಿ ಆಚರಿಸುವ ಮೂಲಕ ಸರ್ವಧರ್ಮಗಳ ನಡುವೆ ಉತ್ತಮ ಭಾಂದವ್ಯ ಬೆಸೆದುಕೊಳ್ಳುವ ಕಾರ್ಯಕ್ರಮಗಳನ್ನು ನಡೆಸುತ್ತಿದ್ದೇವೆ. ಅದರಂತೆ ಈ ಬಾರಿಯೂ ಸೌಹಾರ್ದ ಕ್ರಿಸ್ಮಸ್ 2017 ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಡಿ 21 ರಂದು ನಡೆಯುವ ಈ ಕಾರ್ಯಕ್ರಮದಲ್ಲಿ ಕ್ರಿಸ್ಮಸ್ ಕ್ಯಾರೆಲ್ ಸ್ಪರ್ಧೆ, ನಕ್ಷತ್ರ ಸ್ಪರ್ಧೆ, ಕ್ರಿಸ್ಮಸ್ ಕೇಕ್ ಸ್ಪರ್ಧೆ ಮತ್ತು ಸಂತ ಕ್ಲಾಸ್ ಸ್ಪರ್ಧೆಗಳು ನಡೆಯಲಿದ್ದು, ಭಾಗವಹಿಸುವ ಸ್ಪರ್ಧಿಗಳಿಗೆ 5000, 3000 ಮತ್ತು 2000 ರೂ ಬಹುಮಾನಗಳ ಜೊತೆಗೆ ಸಮಾಧಾನಕರ ಬಹುಮಾನ ನೀಡಿ ಪ್ರೋತ್ಸಾಹಿಸಲಾಗುವುದು ಎಂದು ತಿಳಿಸಿದರು.
ಸಂಜೆ 7.00 ಗಂಟೆಗೆ ಸರ್ವಧರ್ಮಗಳ ಸಂದೇಶ ಸಾರುವ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ಮೇಯರ್ ಕವಿತಾ ಸನಿಲ್ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಕಾರ್ಯಕ್ರಮ ಉದ್ಘಾಟಿಸಲಿದ್ದು, ಸಚಿವ ಯು.ಟಿ ಖಾದರ್ ಸ್ಪರ್ಧೆಗಳಿಗೆ ಚಾಲನೆ ನೀಡಲಿದ್ದಾರೆ. ಮಾಜಿ ಕೇಂದ್ರ ಸಚಿವ ಶ್ರೀ ಆಸ್ಕರ್ ಫೆರ್ನಾಂಡೀಸ್, ಪ್ರಮೋದ್ ಮಧ್ವರಾಜ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸೌಹಾರ್ದ ಕ್ರಿಸ್ಮಸ್ 2017 ಕಾರ್ಯಕ್ರಮದಲ್ಲಿ ವಿಶೇಷ ಶಾಲೆಯ ಮಕ್ಕಳಿಂದ ಸೌಹರ್ದತೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ಹೇಳಿದ್ದಾರೆ.