ಕಡಬ, ಜೂ 5 (Daijiworld News/SM): ಇಲ್ಲಿನ ಕೋರಿಯಾರ್ ಎಂಬಲ್ಲಿ ಅಕ್ರಮ ಮರಳುಗಾರಿಕೆಯ ವರದಿಗೆ ತೆರಳಿದ್ದ ಖಾಸಗಿ ವಾಹಿನಿಯ ವರದಿಗಾರನಿಗೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತಂಡದಿಂದಲೂ ದೂರು ಪ್ರತಿದೂರು ದಾಖಲಾಗಿದೆ.
ಪತ್ರಕರ್ತ ಗಣೇಶ್ ಇಡಾಳ ಹಾಗೂ ತಂಡದವರು ಜೂನ್ 03ರಂದು ಕೋಡಿಂಬಾಳ ಗ್ರಾಮದ ಕೋರಿಯಾರ್ ಎಂಬಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆಯ ವರದಿ ಮಾಡಲೆಂದು ತೆರಳಿದ್ದರು. ಈ ವೇಳೆ ತನ್ನ ವಿರುದ್ಧ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿ ಗಣೇಶ್ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಕಡಬ ಠಾಣೆಗೆ ದೂರು ನೀಡಿದ್ದರು.
ಇದೀಗ ಇದಕ್ಕೆ ಪ್ರತಿಯಾಗಿ ಮತ್ತೊಂದು ತಂಡ ದೂರು ದಾಖಲಾಗಿದೆ. 102ನೇ ನೆಕ್ಕಿಲಾಡಿ ಗ್ರಾಮದ ಇಬ್ಬರು ಮಹಿಳೆಯರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅಶ್ಲೀಲ ಚಿತ್ರ ಸೆರೆ ಹಿಡಿಯಲಾಗಿದೆ ಎಂದು ಆರೋಪಿಸಿ ಠಾಣೆಗೆ ದೂರು ನೀಡಲಾಗಿದೆ.
ಇನ್ನೊಂದೆಡೆ 102 ನೆಕ್ಕಿಲಾಡಿ ಗ್ರಾಮದ ಮೇಲಂಟ ನಿವಾಸಿ ಗಣೇಶ್ ಎಂಬವರು ಕೂಡ ತನ್ನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.
ಪತ್ರಕರ್ತರಿಂದ ಮನವಿ:
ಇನ್ನು ಪತ್ರಕರ್ತನ ಮೇಲೆ ಹಲ್ಲೆ ನಡೆಸಿದ ಹಿನ್ನೆಲೆ ಕಡಬ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಕಡಬ ಠಾಣೆಗೆ ಮನವಿ ಸಲ್ಲಿಸಿದ್ದು, ಆರೋಪಿಗಳನ್ನು ಶೀಘ್ರ ಪತ್ತೆ ಹಚ್ಚಿ, ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಕಡಬ ಪೋಲಿಸರು ತನಿಖೆ ನಡೆಸುತ್ತಿದ್ದಾರೆ.