ಹೆಬ್ರಿ, ನ.22(DaijiworldNews/AK): ಪೊಲೀಸರ ಎನ್ಕೌಂಟರ್ ಗೆ ನಕ್ಸಲ್ ಮುಖಂಡ ವಿಕ್ರಂ ಗೌಡ ಬಲಿಯಾಗಿದ್ದು, ಇದೇ ಪ್ರಕರಣದ ತನಿಖೆ ಮುಂದುವರಿಸಿದ ಪೊಲೀಸರು ಘಟನಾ ಸ್ಥಳದ ಮಾಲಕ ಜಯಂತ ಗೌಡನನ್ನು ಶುಕ್ರವಾರ ವಶಕ್ಕೆ ತೆಗೆದು ಠಾಣೆಗೆ ಕರೆದು ತಂದಿದ್ದರು.
ಈ ಮಾಹಿತಿ ತಿಳಿಯುತ್ತಿದ್ದಂತೆ ಮಲೆಕುಡಿಯ ಸಂಘದ ರಾಜ್ಯ ನಾಯಕ ಶ್ರೀಧರ್ ಗೌಡ ನೇತೃತ್ವದಲ್ಲಿ ಸಮಾಜ ಬಾಂಧವರು ಹಾಗೂ ಗ್ರಾಮಸ್ಥರು ಹೆಬ್ರಿ ಠಾಣೆಗೆ ಮುತ್ತಿಗೆ ಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ನ.17ರಂದು ನಾಡ್ಪಾಲು ಗ್ರಾಮದ ಪೀತುಬೈಲ್ ತೆಂಗುಮಾರಿನ ಜಯಂತ ಗೌಡ ಎಂಬವರಿಗೆ ಸೇರಿದ ಜಾಗದಲ್ಲಿ ಪೊಲೀಸರು ಎನ್ ಕೌಂಟರ್ ನಡೆಸಿದ್ದರು.ಶುಕ್ರವಾರ ಬೆಳಗ್ಗೆ ಹೆಬ್ರಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಜಾಗದ ಮಾಲಕ ಜಯಂತ ಗೌಡನನ್ನು ವಶಕ್ಕೆ ತೆಗೆದು ಹೆಬ್ರಿ ಠಾಣೆಗೆ ಕರೆ ತಂದಿದ್ದಾರೆ. ಜಯಂತ ಗೌಡ ನಿರಪರಾಧಿ. ಘಟನಾ ಸ್ಥಳದಲ್ಲಿ ಅವರನ್ನು ವಿಚಾರಿಸುವ ಬದಲಾಗಿ ಠಾಣೆಗೆ ಕರೆದುಕೊಂಡು ಬರುವ ಅಗತ್ಯವಾದರೇನು ಎಂದು ಮಲೆಕುಡಿಯ ಸಂಘದ ರಾಜ್ಯ ನಾಯಕ ಶ್ರೀಧರ್ ಗೌಡ ಪ್ರಶ್ನಿಸಿದಲ್ಲದೇ ಕೂಡಲೇ ಠಾಣೆಯಿಂದ ಬಿಡುಗಡೆ ಮಾಡುವಂತೆ ಬೇಡಿಕೆ ಮುಂದಿಟ್ಟರು.
ಜಯಂತ ಗೌಡ ಅವರ ಬಿಡುಗಡಯಾಗದೇ ನಾವು ಇಲ್ಲಿಂದ ಕದಲುವುದಿಲ್ಲ ಎಂದು ಅದೇ ಸಂದರ್ಭದಲ್ಲಿ ಪಟ್ಟು ಹಿಡಿದಿದ್ದರು.ಜಯಂತ ಗೌಡ ಅವರಿಂದ ತನಿಖೆಗೆ ಪೂರಕವಾದ ಕೆಲ ಮಾಹಿತಿಗಳನ್ನು ಸಂಗ್ರಹಿಸಿದ ಪೊಲೀಸರು ಬಿಡುಗಡೆಗೊಳಿಸಿದರು.ಮಲೆಕುಡಿಯ ಸಂಘದ ಪ್ರಮುಖ ಗಂಗಾಧರ ಗೌಡ, ನಾಡ್ಪಾಲು ಗ್ರಾಮ ಪಂಚಾಯಿತಿನ ಅಧ್ಯಕ್ಷ ನವೀನ್ ಕುಮಾರ್, ಹೆಬ್ರಿ ಗ್ರಾಮ ಪಂಚಾಯತಿನ ಅಧ್ಯಕ್ಷ ತಾರಾನಾಥ್ ಬಂಗೇರ, ಊರಿನ ಪ್ರಮುಖರಾದ ವಿಜಯ ಶೆಟ್ಟಿ ಮೊದಲಾದವರಿದ್ದರು.