ಉಡುಪಿ, ನ.22(DaijiworldNews/AA): ನಕ್ಸಲ್ ಮುಖಂಡ ವಿಕ್ರಂ ಗೌಡನನ್ನು ನಕ್ಸಲ್ ನಿಗ್ರಹ ಪಡೆ (ಎನ್ಎನ್ಎಫ್) ಎನ್ಕೌಂಟರ್ ಮಾಡಿತ್ತು. ಈ ವೇಳೆ ಆತನ ಜೊತೆಯಲ್ಲಿದ್ದ ಇತರೆ ನಕ್ಸಲರು ಪರಾರಿಯಾಗಿದ್ದರು. ಇದೀಗ ಪರಾರಿಯಾದ ಇತರೆ ನಕ್ಸಲರಿಗಾಗಿ ಎನ್ಎನ್ಎಫ್ ತೀವ್ರ ಶೋಧ ನಡೆಸುತ್ತಿದೆ.
ವಿಕ್ರಂ ಗೌಡ ಜೊತೆಗಿದ್ದ ಇತರ ನಕ್ಸಲರು ಪರಾರಿಯಾಗಿರುವುದರಿಂದ ಪೀತಬೈಲ್ ಸೇರಿದಂತೆ ಸುತ್ತಮುತ್ತಲಿನ ಜನರಲ್ಲಿ ಆತಂಕ ಸೃಷ್ಟಿಸಿದೆ. ಹೀಗಾಗಿ ಎಎನ್ಎಫ್ ಕೂಂಬಿಂಗ್ ತೀವ್ರಗೊಳಿಸಿದೆ. ಪರಾರಿಯಾದವರಿಗಾಗಿ ಕರಾವಳಿಯ ಪಶ್ಚಿಮ ಘಟ್ಟದ ದಟ್ಟ ಕಾಡಿನಲ್ಲಿ ಶೋಧ ಕಾರ್ಯ ನಡೆಯುತ್ತಿದೆ.
ಹಿರಿಯ ಎಎನ್ಎಫ್ ಅಧಿಕಾರಿಗಳು ಕಬ್ಬಿನಾಲೆ, ಪೀತಬೈಲ್, ನಾಡಪಾಲ್, ಕೂಡ್ಲು ಅರಣ್ಯ ವ್ಯಾಪ್ತಿಯಲ್ಲೇ ಬೀಡುಬಿಟ್ಟಿದ್ದಾರೆ. ಸ್ಥಳೀಯರು ಕಾಡಿಗೆ ಹೋಗದಂತೆ ಸೂಚನೆ ನೀಡಲಾಗಿದೆ. ಇನ್ನು ಈ ನಡುವೆ ವಿಕ್ರಂ ಗೌಡ ಎನ್ಕೌಂಟರ್ ನಡೆದ ಜಾಗಕ್ಕೆ ಬೆಂಗಳೂರಿನ ಎಫ್ಎಸ್ಎಲ್ ತಂಡ ಭೇಟಿ ನೀಡಿದೆ.