ಉಡುಪಿ, ನ.20(DaijiworldNews/AA): ಮಲ್ಪೆ ಬೀಚ್ ಅಭಿವೃದ್ದಿ ಸಮಿತಿಯನ್ನು ಬರ್ಖಾಸ್ತುಗೊಳಿಸಿರುವ ಉಡುಪಿ ಜಿಲ್ಲಾಡಳಿತದ ನಿರ್ಣಯವನ್ನು ಪುನರ್ ಪರಿಶೀಲಿಸಬೇಕೆಂದು ಮಾಜಿ ಶಾಸಕ ರಘುಪತಿ ಭಟ್ ಆಗ್ರಹಿಸಿದ್ದಾರೆ.
ಈ ಕುರಿತು ಉಡುಪಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿರುವ ರಘುಪತಿ ಭಟ್, '2003-04 ರಲ್ಲಿ ಅಂದಿನ ಜಿಲ್ಲಾಧಿಕಾರಿಗಳಾಗಿದ್ದ ಉಮಾಶಂಕರ್ ಅವರು ಮಲ್ಪೆ ಬೀಚ್ ನ ಸಮಗ್ರ ಅಭಿವೃದ್ದಿ ದೃಷ್ಟಿಯಿಂದ ಜಿಲ್ಲಾ ಪ್ರವಾಸೋದ್ಯಮ ಸಮಿತಿಯಿಂದ ನಿರ್ಣಯಿಸಿ ಸರಕಾರದ ಅನುಮತಿ ಪಡೆದು ಮಲ್ಪೆ ಬೀಚ್ ಅಭಿವೃದ್ದಿ ಸಮಿತಿಯನ್ನು ರಚಿಸಲಾಗಿತ್ತು. ಈ ಸಮಿತಿಗೆ ಜಿಲ್ಲಾಧಿಕಾರಿ ಅಧ್ಯಕ್ಷರಾಗಿ, ಉಡುಪಿ ನಗರ ಸಭೆ ಪೌರಾಯುಕ್ತರು ಕಾರ್ಯದರ್ಶಿಯಾಗಿ, ಸ್ಥಳೀಯ ಶಾಸಕರು, ನಗರಸಭಾ ಸದಸ್ಯರು, ನಗರಸಭಾ ಅಧ್ಯಕ್ಷರು, ಸ್ಥಳೀಯ 5 ಭಜನಾ ಮಂಡಳಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಸದಸ್ಯರಾಗಿ ನೇಮಿಸಲಾಗಿದೆ. ಈ ಸಮಿತಿ ಉತ್ತಮವಾಗಿ ಕಾರ್ಯನಿರ್ವಹಿಸಿ ಮಲ್ಪೆ ಬೀಚ್ ನ ಇಂದಿನ ಪ್ರಗತಿಗೆ ಕಾರಣವಾಗಿದೆ. ಮಲ್ಪೆ ಬೀಚ್ ಅನ್ನು ಅತ್ಯುತ್ತಮವಾಗಿ ಅಭಿವೃದ್ಧಿಗೊಳಿಸಿ ಪ್ರವಾಸಿಗರನ್ನು ಆಕರ್ಷಿಸುವಂತೆ ಮಾಡಿದ ಮಲ್ಪೆ ಬೀಚ್ ಅಭಿವೃದ್ದಿ ಸಮಿತಿಯನ್ನು ಏಕಾಏಕಿ ಬರ್ಖಾಸ್ತುಗೊಳಿಸುವ ಉದ್ದೇಶವೇನು? ಹಿಂದಿನ ಎಲ್ಲಾ ಜಿಲ್ಲಾಧಿಕಾರಿಗಳು ಈ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದು ಅವರಿಗೆ ಕಾನೂನು ಜ್ಞಾನವಿಲ್ಲವೇ? ಈ ವಿಷಯದಲ್ಲಿ ಅವರು ತಪ್ಪುಗಾರರೇ ಎಂಬುವುದು ಸಾರ್ವಜನಿಕರ ಪ್ರಶ್ನೆಯಾಗಿದೆ' ಎಂದು ಉಲ್ಲೇಖಿಸಿದ್ದಾರೆ.
'ಮಲ್ಪೆ ಬೀಚ್ ಅಭಿವೃದ್ದಿಯಲ್ಲಿ ಸ್ಥಳೀಯ ಭಜನಾ ಮಂಡಳಿಗಳ ಪಾತ್ರ ಬಹಳ ಮಹತ್ವದ್ದಾಗಿದೆ. 2004 ರ ಮೊದಲು ಈ ಬೀಚ್ ನಲ್ಲಿ ರಾತ್ರಿ 7 ಗಂಟೆ ಯ ಮೇಲೆ ಪ್ರವಾಸಿಗರು ಮತ್ತು ಸ್ಥಳೀಯರ ಮಧ್ಯೆ ಘರ್ಷಣೆಯಾಗುತ್ತಿದ್ದು, ಪ್ರವಾಸಿಗರಿಗೆ ಬೀಚ್ ಗೆ ಬರಲು ಭಯಪಡುತ್ತಿದ್ದರು. ನಂತರ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸ್ಥಳೀಯ ನಗರಸಭಾ ಸದಸ್ಯರನ್ನು ಮತ್ತು ಸ್ಥಳೀಯ ಭಜನಾ ಮಂಡಳಿಗಳನ್ನು ಸೇರಿಸಿಕೊಂಡು ಮಲ್ಪೆ ಬೀಚ್ ಅಭಿವೃದ್ದಿ ಸಮಿತಿಯಲ್ಲಿ ಸದಸ್ಯರಾಗಿ ನೇಮಿಸಿದ ಬಳಿಕ ಸ್ಥಳೀಯ ಪ್ರವಾಸೋದ್ಯಮದಲ್ಲಿ ಸ್ಥಳಿಯರಿಗೆ ಉದ್ಯೋಗವಕಾಶಗಳನ್ನು ನೀಡಿದಾಗ ಎಲ್ಲರ ಸಹಕಾರದಿಂದ ಬೀಚ್ ಅಭಿವೃದ್ದಿಯ ಜೊತೆಯಲ್ಲಿ ಎಲ್ಲಾ ಪ್ರವಾಸಿಗರು ರಾತ್ರಿಯೂ ಬೀಚ್ ನಲ್ಲಿ ಪ್ರವಾಸಿಗರು ಸುರಕ್ಷಿತವಾಗಿ ಬೀಚ್ ನಲ್ಲಿ ಆನಂದಿಸುವಂತಾಗಿದೆ' ಎಂದು ತಿಳಿಸಿದರು.
'ಈ ಮಲ್ಪೆ ಬೀಚ್ ಅಭಿವೃದ್ದಿ ಸಮಿತಿಯನ್ನು ಬರ್ಖಾಸ್ತುಗೊಳಿಸುವುದರಿಂದ ಸ್ಥಳೀಯ ಭಜನಾ ಮಂಡಳಿಗಳ ಜವಾಬ್ದಾರಿ ಕಡಿಮೆಯಾಗಿ ಸ್ಥಳೀಯ ಜನರ ಸಹಕಾರ ಕಡಿಮೆಯಾಗಿ ಬೀಚ್ ಅಭಿವೃದ್ದಿಗೆ ಮತ್ತೆ ತೊಂದರೆಯಾಗುವ ಸಾಧ್ಯೆತಯಿದ್ದು ಇದು ಪ್ರವಾಸೋದ್ಯಮಕ್ಕೆ ಧಕ್ಕೆಯಾಗುವ ಆತಂಕವಿದೆ. ಆದುದರಿಂದ ಇತ್ತೀಚಿಗೆ ಕೈಗೊಂಡ ಜಿಲ್ಲಾ ಪ್ರವಾಸೋದ್ಯಮ ಸಮಿತಿಯ ನಿರ್ಣಯವನ್ನು ತಡೆಹಿಡಿದು ಹಿಂದಿನಂತೆ ಮಲ್ಪೆ ಬೀಚ್ ಅಭಿವೃದ್ದಿ ಸಮಿತಿಯನ್ನು ಮುಂದುವರೆಸಿ ಮಲ್ಪೆ ಬೀಚ್ ನಲ್ಲಿ ಪ್ರವಾಸೋದ್ಯಮ ಬೆಳೆಸಲು ಅವಕಾಶ ಮಾಡಿಕೊಡಬೇಕೆಂದು' ರಘುಪತಿ ಭಟ್ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.