ಮಂಗಳೂರು, ಜೂ05(Daijiworld News/SS): ರಮ್ಜಾನ್ ತಿಂಗಳ ಉಪವಾಸದ ಬಳಿಕ ಶವ್ವಾಲ್ ತಿಂಗಳ ಆರಂಭದ ದಿನ ಈದುಲ್ ಫಿತ್ರ್ ಹಬ್ಬವನ್ನು ಮಂಗಳೂರು ಸಹಿತ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸಂಭ್ರಮ, ಸಡಗರದಿಂದ ಆಚರಿಸಲಾಗಿದೆ. ನಗರದ ಪ್ರತಿಷ್ಠಿತ ಎಕ್ಸ್ಪರ್ಟ್ ವಿದ್ಯಾ ಸಂಸ್ಥೆಯಲ್ಲಿಯೂ ಈದುಲ್ ಫಿತ್ರ್ ಹಬ್ಬವನ್ನು ವಿದ್ಯಾರ್ಥಿಗಳ ಸಮ್ಮುಖದಲ್ಲಿ ಆಚರಿಸಲಾಯಿತು.
ವಿದ್ಯಾಸಂಸ್ಥೆಯಲ್ಲಿ ಸಂಭ್ರಮದಿಂದ ಹಮ್ಮಿಕೊಂಡ ಈ ಈದುಲ್ ಫಿತ್ರ್ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಭಾಗವಹಿಸಿದರು. ಸಚಿವರ ಪುತ್ರಿ ಹವ್ವಾ ನಸೀಮಾ (ಕುರಾನ್) ಕಿರಾಅತ್ ಪಠಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಯು.ಟಿ ಖಾದರ್, ವಿದ್ಯಾರ್ಥಿಗಳು 50 ವರುಷ ಹಿಂದಿನದ್ದನ್ನೂ ಕೂಡ ಜೀವನದಲ್ಲಿ ಯೋಚಿಸಬೇಕು, ಜೊತೆಗೆ 50 ವರುಷ ಮುಂದಿನದ್ದನ್ನೂ ಕೂಡ ಯೋಚಿಸಬೇಕು. ಯಾಕಂದರೆ, 50 ವರುಷದ ಹಿಂದಿನ ದಿನಗಳು ನಮಗೆ ಸಂಸ್ಕೃತಿಯ ಪಾಠವನ್ನು ಹೇಳಿಕೊಡುತ್ತದೆ. 50 ವರುಷದ ಮುಂದಿನ ದಿನಗಳ ಬಗ್ಗೆ ಚಿಂತಿಸಿದರೆ, ಅದು ಆಧುನಿಕ ಜಗತ್ತಿಗೆ ಯಾವ ರೀತಿ ಹೊಂದಿಕೊಳ್ಳಬಹುದು ಎಂಬುವುದನ್ನು ತಿಳಿಸುತ್ತದೆ ಎಂದು ಹೇಳಿದರು.
ಪ್ರತಿಷ್ಠಿತ ಎಕ್ಸ್ಪರ್ಟ್ ವಿದ್ಯಾಸಂಸ್ಥೆಯು ಶಿಕ್ಷಣದ ಜೊತೆಗೆ ಎಲ್ಲಾ ಧರ್ಮದ ಹಬ್ಬಗಳನ್ನು ಆಚರಿಸುವುದರ ಮೂಲಕ ಮಕ್ಕಳಿಗೆ ಸೌಹಾರ್ದತೆಯ ಪಾಠ ಮಾಡುತ್ತಿದೆ. ಕ್ರಿಸ್ಮಸ್, ದೀಪಾವಳಿ ಸೇರಿದಂತೆ ಈದುಲ್ ಫಿತ್ರ್ ಹಬ್ಬ ಆಚರಿಸುವುದರ ಮೂಲಕ ಶ್ಲಾಘನಗೆ ಪಾತ್ರವಾಗಿದೆ. ಇಂತಹ ಮೌಲ್ಯಯುತವಾದ ಕಾರ್ಯಕ್ರಮಗಳು ಮುಂದೆಯೂ ಈ ಶಿಕ್ಷಣ ಸಂಸ್ಥೆಯಲ್ಲಿ ನಡೆಯುತ್ತಿರಲಿ ಎಂದು ನುಡಿದರು.
ಪ್ರತಿಷ್ಠಿತ ಎಕ್ಸ್ಪರ್ಟ್ ವಿದ್ಯಾಸಂಸ್ಥೆಯ ವತಿಯಿಂದ ಈದುಲ್ ಫಿತ್ರ್ ಹಬ್ಬದ ಅಂಗವಾಗಿ ವಿದ್ಯಾರ್ಥಿಗಳಿಗೆ ವಿಶೇಷ ಜೌತಣಕೂಟವನ್ನು ಏರ್ಪಡಿಸಲಾಗಿತ್ತು.