ಮಂಗಳೂರು, ಜೂ05(Daijiworld News/SS): ಪಿಜಿ ಮತ್ತು ಹೋಮ್ ಸ್ಟೇಗಳಿಗೆ ಏಕರೂಪದ ಹೊಸ ಪಾಲಿಸಿಯನ್ನು ತರುವ ಕುರಿತು ಈಗಾಗಲೇ ಕರಡು ಸಿದ್ಧವಾಗಿದ್ದು, ರಾಜ್ಯ ಸರಕಾರ ಅದನ್ನು ಶೀಘ್ರದಲ್ಲಿಯೇ ಜಾರಿಗೆ ತರುವ ಕುರಿತು ಚಿಂತನೆ ನಡೆಸಿದೆ ಎಂದು ರಾಜ್ಯ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ನಗರ ಪ್ರದೇಶದಲ್ಲಿರುವ ಪಿಜಿ (ಪೇಯಿಂಗ್ ಗೆಸ್ಟ್) ಮತ್ತು ಹೋಮ್ ಸ್ಟೇಗಳಿಗೆ ಏಕರೂಪದ ಹೊಸ ಪಾಲಿಸಿಯನ್ನು ತರುವ ಕುರಿತು ಈಗಾಗಲೇ ರಾಜ್ಯದ ಸಾಕಷ್ಟು ಸಂಘ ಸಂಸ್ಥೆಗಳಿಂದ ಬೇಡಿಕೆಗಳು ಬಂದ ಪರಿಣಾಮ ಸರಕಾರ ಇಂತಹ ನಿರ್ಧಾರಕ್ಕೆ ಬಂದಿದೆ ಎಂದು ಹೇಳಿದರು.
ನಗರ ಪ್ರದೇಶದಲ್ಲಿ ಸಾಕಷ್ಟು ಪಿಜಿಗಳು ನಡೆಯುತ್ತಿದೆ. ಆದರೆ ಅದಕ್ಕೆ ಯಾವುದೇ ರೀತಿಯ ನೀತಿ-ನಿಯಮಗಳು ಇಲ್ಲ. ಭದ್ರತೆ ವಿಚಾರದಲ್ಲೂ ಅಷ್ಟೇ. ಈ ಕಾರಣದಿಂದ ಪಿಜಿ ಹಾಗೂ ಹೋಮ್ ಸ್ಟೇಗೆ ಸೂಕ್ತವಾದ ನೀತಿ- ನಿಯಮಗಳನ್ನು ತರುವ ಕುರಿತು ಪಾಲಿಸಿ ಮಾಡಲಾಗುತ್ತದೆ. ಈ ಮೂಲಕ ಅಲ್ಲಿನವರಿಗೆ ಭದ್ರತೆ, ಕನಿಷ್ಟ ಮೂಲಭೂತ ಸವಲತ್ತು ನೀಡುವ ಕುರಿತು ಅದರಲ್ಲಿ ಉಲ್ಲೇಖವಾಗುತ್ತದೆ ಎಂದು ತಿಳಿಸಿದರು.
ಈ ಕುರಿತು ಇಲಾಖೆ ಅಧಿಕಾರಿ, ಕಾನೂನು ತಜ್ಞರಲ್ಲಿ ಈ ಕುರಿತು ಚರ್ಚೆ ನಡೆಸಿದ್ದೇವೆ. ನಗರದ ಪ್ರದೇಶ ವ್ಯಾಪ್ತಿಯಲ್ಲಿ ಮಾದರಿ ಪಾಲಿಸಿಯನ್ನು ತರುವ ಮೂಲಕ ಭದ್ರತೆ, ಸ್ಥಳೀಯ ಸಂಸ್ಥೆಗಳಿಗೆ ಅದರ ಮಾಹಿತಿ, ಎಷ್ಟು ಪಿಜಿಗಳಿವೆ, ಮಹಿಳಾ ಪಿಜಿಗಳಿಗೆ ಇರುವ ಭದ್ರತೆ, ರೋಡ್ ಸೈಡ್ನಿಂದ ಎಷ್ಟು ಒಳಭಾಗದಲ್ಲಿದೆ. ಯಾವ ಪ್ರದೇಶದಲ್ಲಿ ಪಿಜಿಗಳು ಇರಕೂಡದು, ಆರೋಗ್ಯ ವಿಚಾರ, ಪಿಜಿ ಮಾಡುವವರಿಗೆ ಇತರರ ನೀಡುವ ಕಿರುಕುಳಕ್ಕೆ ಕ್ರಮ ಹೀಗೆ ಹತ್ತಾರು ವಿಚಾರಗಳು ಇದರಲ್ಲಿ ಅಡಕವಾಗಿರುತ್ತದೆ ಎಂದು ಹೇಳಿದರು.