ಉಡುಪಿ, ನ.19(DaijiworldNews/AA): ಹೆಬ್ರಿ ತಾಲೂಕಿನ ಕಬ್ಬಿನಾಲೆಯಲ್ಲಿ ನಡೆದ ಎನ್ಕೌಂಟರ್ ನಲ್ಲಿ ಎಎನ್ಎಫ್ ನಕ್ಸಲ್ ಮುಖಂಡ ವಿಕ್ರಂಗೌಡನನ್ನು ಹತ್ಯೆ ಮಾಡಲಾಗಿದ್ದು, ಘಟನಾ ಸ್ಥಳಕ್ಕೆ ಆಂತರಿಕ ಭದ್ರತಾ ಡಿಜಿಪಿ ರೂಪಾ ಭೇಟಿ ನೀಡಿದ್ದಾರೆ.
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿಕ್ರಂ ಗೌಡ ಅಲಿಯಾಸ್ ಶ್ರೀಕಾಂತ್ ಕರ್ನಾಟಕದ ಮೋಸ್ಟ್ ವಾಂಟೆಡ್ ನಕ್ಸಲ್ ಆಗಿದ್ದ. ಎಎನ್ಎಫ್ ನಕ್ಸಲ್ ಚಕಮಕಿ ನಡೆದಿದೆ. ಪ್ರಕರಣದ ಕೂಲಂಕಷವಾಗಿ ತನಿಖೆ ನಡೆಯುತ್ತಿದೆ. ವಿಕ್ರಮ್ ಗೌಡ ಮೇಲೆ 61 ಕೇಸ್ ಇತ್ತು. ಪಿಟ್ಟಿಕೇಸ್, ಮರ್ಡರ್, ಸೇರಿದಂತೆ ಹಲವು ಕೇಸ್ ಇವೆ. ಕೇರಳದಲ್ಲಿ 19 ಕೇಸ್ಗಳು ದಾಖಲಾಗಿತ್ತು ಎಂದು ಮಾಹಿತಿ ನೀಡಿದ್ದಾರೆ.
ಈ ಕಾರ್ಯಾಚರಣೆ ಮುಖ್ಯ ರೂವಾರಿ ಜಿತೇಂದ್ರ ದಯಾಂ. ಒಟ್ಟು 10 ದಿನದ ಸತತ ಕಾರ್ಯಾಚರಣೆ ಮಾಡಿದ್ದೇವೆ. ಕಾಡಿನಲ್ಲಿ ನವೆಂಬರ್ 10 ರಿಂದ ಕೂಂಬಿಂಗ್ ಮಾಡುತ್ತಿದ್ದೇವೆ. ಐಎಸ್ ಡಿ ಡಿಜಿಪಿ ಪ್ರಣಬ್ ಮೋಹನ್ ಕಾರ್ಯಾಚರಣೆ ಭಾಗವಾಗಿದ್ದರು. ಇಂಟ್, ಜಿಲ್ಲಾ ಪೊಲೀಸ್ ಸಹಯೋಗದ ಈ ಕಾರ್ಯಾಚರಣೆ ನಡೆಸಲಾಗಿದೆ. ವಿಕ್ರಮ್ ಎನ್ ಕೌಂಟರ್ ಎಎನ್ಎಫ್ ಕ್ಯಾಂಪ್ಗೆ ಫೆದರ್. ಎಎನ್ಎಫ್ ಕ್ಯಾಪ್ ಗೆ ಈ ಎನ್ ಕೌಂಟರ್ ಗರಿಯಾಗಿದೆ ಎಂದರು.
ಇನ್ನೂ 5-6 ಜನ ನಕ್ಸಲರು ಇದ್ದಾರೆ. ಅವರ ಪ್ರತಿಕ್ರಿಯೆಗೆ ಕಾಯ್ತೇವೆ. ನಕ್ಸಲರಿಗಾಗಿ ನಿರಂತರವಾಗಿ ಶೋಧ ನಡೆಸುತ್ತೇವೆ. ನಕ್ಸಲರ ಶರಣಾಗತಿಗೆ ಮೊದಲ ಆದ್ಯತೆ ನೀಡಿದ್ದರೂ ಅವರು ಶರಣಾಗಿಲ್ಲ. ಹೀಗಾಗಿ ನಕ್ಸಲರ ವಿರುದ್ಧ ಎಎನ್ಎಫ್ ಕಾರ್ಯಾಚರಣೆ ನಡೆಸಿದ್ದೆವು. ಎಎನ್ಎಫ್ ಎಸ್ಪಿ ಜಿತೇಂದ್ರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಬೆಂಗಳೂರಿನಿಂದ 75, ಶಿವಮೊಗ್ಗದಿಂದ 25 ಸಿಬ್ಬಂದಿ ಬಂದಿದ್ದರು. 46 ವರ್ಷದ ವಿಕ್ರಂ ಗೌಡ ಕಬಿನಿ ದಳಂ 2ನೇ ತಂಡ ಮುನ್ನಡೆಸುತ್ತಿದ್ದ. ಕಾರ್ಕಳ ತಾಲೂಕು ಮೂಲದ ವಿಕ್ರಂ ಗೌಡ 4ನೇ ತರಗತಿ ಓದಿದ್ದ. ಸದ್ಯ ಕೆಎಂಸಿ ಮಣಿಪಾಲದಲ್ಲಿ ವಿಕ್ರಂ ಮರಣೋತ್ತರ ಪರೀಕ್ಷೆ ನಡೆಯಲಿದೆ. ಹತ್ಯೆಯಾದ ವಿಕ್ರಂ ಗೌಡ ಕುಟುಂಬಕ್ಕೆ ನಾವು ಮಾಹಿತಿ ನೀಡಿದ್ದೇವೆ ಎಂದು ತಿಳಿಸಿದರು.
ಘಟನಾ ಸ್ಥಳಕ್ಕೆ ಡಿಜಿಪಿ ರೂಪಾ ಅವರೊಂದಿಗೆ ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಹಾಗೂ ಉಡುಪಿ ಎಸ್ ಪಿ ಡಾ. ಅರುಣ್ ಕುಮಾರ್ ಭೇಟಿ ನೀಡಿದ್ದಾರೆ. ಇನ್ನು ಪೊಲೀಸರು ಮಹಜರು ಪ್ರಕ್ರಿಯೆ ನಡೆಸುತ್ತಿದ್ದು, ಸ್ಥಳಕ್ಕೆ ಎಫ್ ಎಸ್ಎಲ್ ತಂಡ ಆಗಮಿಸಿದೆ. ಜೊತೆಗೆ ಬೆರಳಚ್ಚು ತಜ್ಞರು ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ.