ಹೆಬ್ರಿ, ನ.19(DaijiworldNews/AA): ಮಹತ್ವದ ಬೆಳವಣಿಗೆಯಲ್ಲಿ ಹೆಬ್ರಿ ತಾಲೂಕಿನ ಕಬ್ಬಿನಾಲೆಯಲ್ಲಿ ನಡೆದ ಎನ್ಕೌಂಟರ್ ನಲ್ಲಿ ನಕ್ಸಲ್ ನಿಗ್ರಹ ಪಡೆ(ಎಎನ್ಎಫ್) ನಕ್ಸಲ್ ಮುಖಂಡ ವಿಕ್ರಂಗೌಡನನ್ನು ಹತ್ಯೆ ಮಾಡಿದೆ. ಈ ಘಟನೆಯು ಉಡುಪಿ ಜಿಲ್ಲೆಯಲ್ಲಿ 13 ವರ್ಷಗಳ ನಂತರ ವರದಿಯಾದ ಮೊದಲ ಎನ್ಕೌಂಟರ್ ಆಗಿದೆ.
ಕಳೆದ ಕೆಲದಿನಗಳಿಂದ ಹೆಬ್ರಿ, ಶೃಂಗೇರಿ ಭಾಗದಲ್ಲಿ ನಕ್ಸಲ ಚಲನವಲನದ ಬಗ್ಗೆ ಎಎನ್ಎಫ್ಗೆ ಮಾಹಿತಿ ಲಭ್ಯವಾಗಿತ್ತು. ಈ ನಡುವೆ ಎಎನ್ಎಫ್ ತಂಡ ನಿನ್ನೆ ತಂಡ ಕೂಬಿಂಗ್ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಮೂವರು ನಕಕ್ಸಲರ ತಂಡ ಇರುವುದನ್ನು ಪತ್ತೆ ಮಾಡಿದೆ. ಈ ವೇಳೆ ನಡೆದ ಶೂಟೌಟ್ನಲ್ಲಿ ಓರ್ವ ಹತನಾಗಿದ್ದು, ಇನ್ನೂ ಇಬ್ಬರು ನಕ್ಸಲರು ಕಾಡಿನಲ್ಲಿ ಪರಾರಿಯಾಗಿದ್ದಾರೆ. ಈ ಶೂಟೌಟ್ನಲ್ಲಿ ವಿಕ್ರಂಗೌಡ ಎನ್ಕೌಂಟರ್ ಆಗಿದ್ದಾನೆ. ಹೆಬ್ರಿ ವ್ಯಾಪ್ತಿಯ ಪೀತೆ ಬೈಲ್ ಎಂಬಲ್ಲಿ ಘಟನೆ ನಡೆದಿದೆ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.
ಎನ್ಕೌಂಟರ್ ನಡೆದಾಗ ಅಗತ್ಯ ಸಾಮಗ್ರಿಗಳನ್ನು ಪಡೆಯಲು ಸೋಮವಾರ ತಡರಾತ್ರಿ ನಕ್ಸಲ್ ತಂಡ ಕಬ್ಬಿನಾಲೆ ಗ್ರಾಮಕ್ಕೆ ಭೇಟಿ ನೀಡಿತ್ತು ಎನ್ನಲಾಗಿದೆ. ನಕ್ಸಲ್ ಚಲನವಲನಗಳ ಬಗ್ಗೆ ಖಚಿತ ಮಾಹಿತಿ ಲಭ್ಯವಾದ ಬಳಿಕ ಎಎನ್ಎಫ್ ಈ ಪ್ರದೇಶದಲ್ಲಿ ಕೂಂಬಿಂಗ್ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ.
ವಿಕ್ರಂಗೌಡ ಮೂಲತಃ ಹೆಬ್ರಿಯ ಕಬ್ಬಿನಾಲೆಯವರಾಗಿದ್ದು, ಶೃಂಗೇರಿ, ಕಾರ್ಕಳ ಭಾಗದಲ್ಲಿ ಸಕ್ರಿಯನಾಗಿದ್ದ. ವಿಕ್ರಮ್ ಗೌಡ ಅವರು ನಕ್ಸಲ್ ಚಳವಳಿಯ ನೇತ್ರಾವತಿ ಘಟಕದ ಕಮಾಂಡರ್ ಆಗಿದ್ದರು. ಕೇರಳದಲ್ಲಿ ನಕ್ಸಲ್ ಚಟುವಟಿಕೆಗೆ ಥಂಡರ್ ಬೋಲ್ಟ್ ಟೀಂ ಬಿಗಿ ಮಾಡಿದ ಬಳಿಕ ನಕ್ಸಲ್ ಟೀಂ ಕರ್ನಾಟಕಕ್ಕೆ ವಾಪಸ್ ಆಗಿತ್ತು.
ಉಡುಪಿ ಜಿಲ್ಲೆಯಲ್ಲಿ 13 ವರ್ಷಗಳ ಹಿಂದೆ ಕಾರ್ಕಳ ತಾಲೂಕಿನ ಈಡು ಗ್ರಾಮದಲ್ಲಿ ಕೊನೆಯ ನಕ್ಸಲ್ ಎನ್ಕೌಂಟರ್ ನಡೆದಿತ್ತು. ಇದೀಗ ವಿಕ್ರಂಗೌಡ ಅವರ ಎನ್ಕೌಂಟರ್ ಈ ಪ್ರದೇಶದಲ್ಲಿ ನಕ್ಸಲ್ ಚಟುವಟಿಕೆಗಳನ್ನು ನಿಗ್ರಹಿಸುವಲ್ಲಿ ಮಹತ್ವದ ಹೆಜ್ಜೆಯಾಗಿದೆ. ಉಳಿದ ನಕ್ಸಲರಿಗಾಗಿ ಹುಡುಕಾಟ ಮುಂದುವರಿದಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೆ ಲಭ್ಯವಾಗಬೇಕಿದೆ.