ಕಾಸರಗೋಡು, ಜೂ 05 (Daijiworld News/MSP): ನೈಋತ್ಯ ಮುಂಗಾರು ಇನ್ನಷ್ಟು ವಿಳಂಬಗೊಳ್ಳಲಿದೆ . ಜೂನ್ ಆರರಂದು ಕೇರಳಕ್ಕೆ ತಲುಪಬೇಕಿದ್ದ ಮುಂಗಾರು ಎರಡು ದಿನಗಳಷ್ಟು ವಿಳಂಬಗೊಳ್ಳಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಜೂನ್ ಎಂಟರ ವೇಳೆಗಷ್ಟೇ ಮುಂಗಾರು ಕೇರಳಕ್ಕೆ ಪ್ರವೇಶಿಸಲಿದೆ. ನಾಳೆ( ಜೂನ್ 6) ಕೇರಳಕ್ಕೆ ಪ್ರವೇಶಿಸಬೇಕಿತ್ತು.
ಅರಬ್ಬಿ ಸಮುದ್ರದ ಪಶ್ಚಿಮ ಭಾಗದಲ್ಲಿ ಉಂಟಾಗಿರು ವಾಯು ಭಾರ ಕುಸಿತ ಮಳೆಯ ಮಾರುತಕ್ಕೆ ಅಡ್ಡಿಯಾಗುತ್ತಿದೆ. ಇದರಿಂದ ಮಾನ್ಸೂನ್ ಮತ್ತಷ್ಟು ವಿಳಂಬಗೊಳ್ಳಲು ಕಾರಣವಾಗುತ್ತಿದೆ ಎಂದು ಹವಾಮಾನ ಇಲಾಖೆ ಮೂಲಗಳು ತಿಳಿಸಿವೆ .
ಕೇರಳದಲ್ಲಿ ಮಾನ್ಸೂನ್ ವಿಳಂಬವಾದರೂ ಸಾಮಾನ್ಯವಾಗಿ ಜೂನ್ ಐದರೊಳಗೆ ಆರಂಭಗೊಳ್ಳುತ್ತಿದೆ. ಆದರೆ 1972 ರ ಬಳಿಕ ಇಷ್ಟು ವಿಳಂಬಗೊಳ್ಳುತ್ತಿದೆ . 1972 ರಲ್ಲಿ ಜೂನ್ 18 ಕ್ಕೆ ಮುಂಗಾರು ಮಳೆ ಆರಂಭಗೊಂಡಿತ್ತು . 1918 ಮತ್ತು 1955 ರಲ್ಲಿ ಜೂನ್ 11 ಕ್ಕೆ ಮಳೆ ಆರಂಭಗೊಂಡಿತ್ತು.
ಈ ವರ್ಷ ಮಳೆ ವಿಳಂಬಗೊಳ್ಳುತ್ತಿದ್ದು , ಜೂನ್ ಎಂಟರಂದು ಆರಂಭಗೊಳ್ಳುವ ಸಾಧ್ಯತೆ ಇದ್ದರೂ ಇನ್ನಷ್ಟು ವಿಳಂಬಗೊಳ್ಳುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ ಎನ್ನುತ್ತಿವೆ ಹವಾಮಾನ ಇಲಾಖೆ ಮೂಲಗಳು.