ಉಳ್ಳಾಲ,ನ.17(DaijiworldNews/TA):ಈಜುಕೊಳದಲ್ಲಿ ಮೂವರು ಯುವತಿಯರ ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ ಸೋಮೇಶ್ವರದ ಖಾಸಗಿ ಬೀಚ್ ರೆಸಾಟ್೯ಗೆ ಅಧಿಕಾರಿಗಳು ಬೀಗಮುದ್ರೆ ಹಾಕಿದ್ದಾರೆ. ಈ ರೆಸಾಟ್೯ನ ಟ್ರೇಡ್ ಲೈಸನ್ಸ್ ಮತ್ತು ಟೂರಿಸಂ ಪರವಾನಿಗೆಯನ್ನು ಅಮಾನತ್ತಿನಲ್ಲಿಡಲಾಗಿದೆ ಎಂದು ಮಂಗಳೂರು ಉಪವಿಭಾಗಾಧಿಕಾರಿಗಳು ತಿಳಿಸಿದ್ದಾರೆ.
ಸೋಮೇಶ್ವರ ಉಚ್ಚಿಲದ ಖಾಸಗಿ ರೆಸಾರ್ಟ್ ನ ಸ್ವಿಮ್ಮಿಂಗ್ ಪೂಲ್ ನಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರು ಸಾವನ್ನಪ್ಪಿದ್ದಾರೆ. ಮೈಸೂರು ಮೂಲದ ಮೂವರು ಯುವತಿಯರಾದ ಕೀರ್ತನಾ ಎನ್ (21), ನಿಶಿತಾ ಎಂ ಡಿ (21) ಮತ್ತು ಪಾರ್ವತಿ ಎಸ್ (20) ಮೃತಪಟ್ಟ ವಿದ್ಯಾರ್ಥಿನಿಯರು. ಮೂವರು ಯುವತಿಯರು ಶನಿವಾರ ಮುಂಜಾನೆ ರೆಸಾರ್ಟ್ ಗೆ ಬಂದಿದ್ದರು. ಯುವತಿಯರು ಈಜುಕೊಳದ ದಂಡೆಯಲ್ಲಿ ಹೊರ ಉಡುಪುಗಳನ್ನ ಕಳಚಿಟ್ಟಿದ್ದು ಐಪೋನ್ ಒಂದನ್ನ ಈಜು ಕೊಳದ ನೀರಿಗೆ ಗುರಿಯಾಗಿ ರೆಕಾರ್ಡ್ ಇಟ್ಟು ನೀರಿಗೆ ಆಟಕ್ಕಿಳಿದಿದ್ದಾರೆ.
ಮೂವರೂ ಈಜುಕೊಳದಲ್ಲಿ ಆಟವಾಡುತ್ತಿದ್ದ ವೇಳೆ ಆರಂಭದಲ್ಲಿ ಓರ್ವ ಯುವತಿ ನೀರಿನಲ್ಲಿ ಮುಳುಗಿದ್ದು, ರಕ್ಷಣೆಗೆ ಮುಂದಾದ ಮತ್ತೊಬ್ಬಾಕೆಯೂ ಮುಳುಗಿದ್ದ ಕಾರಣ ಮೂರನೇ ಯುವತಿಯೂ ರಕ್ಷಣೆಗೆಂದು ಅವರ ಬಳಿ ಬಂದ ಸಮಯದಲ್ಲಿ ಮೂವರೂ ಸಾವೀಗೀಡಾಗಿದ್ದಾರೆ. ಕೆಲವೇ ನಿಮಿಷದ ಅಂತರದಲ್ಲಿ ಈ ಘಟನೆ ನಡೆದಿದೆ. ಯುವತಿಯರಿಗೆ ಈಜು ತಿಳಿಯದೆ ಇರುವುದರಿಂದ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.
ರೆಸಾರ್ಟ್ ಸಿಬ್ಬಂದಿಗಳು ಈಜುಕೊಳದ ಬಳಿ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಯುವತಿಯರು ನೀರಿನಲ್ಲಿ ಮುಳುಗುತ್ತಿರುವ ದೃಶ್ಯ ರೆಸಾರ್ಟ್ ಸಿಸಿಟಿವಿಯಲ್ಲಿ ದಾಖಲಾಗಿದೆ. ಉಳ್ಳಾಲ ಪೊಲೀಸ್ ಇನ್ಸ್ ಪೆಕ್ಟರ್ ಹೆಚ್.ಎನ್ ಬಾಲಕೃಷ್ಣ ನೇತೃತ್ವದ ತಂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.