ಮಂಗಳೂರು, ನ.17(DaijiworldNews/AA): ನ್ಯಾಯಾಲಯದ ತೀರ್ಪು ಬಂದು ಯಾರು ತಪ್ಪಿತಸ್ಥ ಎಂದು ತೀರ್ಮಾನ ಆಗುತ್ತದೋ ಆಗ ಅವರು ರಾಜೀನಾಮೆ ನೀಡಬೇಕು, ಅವರನ್ನು ಜೈಲಿಗೆ ಕಳುಹಿಸುವ ಕೆಲಸವೂ ಆಗಬೇಕು. ನ್ಯಾಯಾಲಯದ ತೀರ್ಪು ಬರುವವರೆಗೆ ಯಾರೂ ರಾಜೀನಾಮೆ ಕೊಡಬೇಕಾಗಿಲ್ಲ ಎಂದು ಶಾಸಕ ಜಿ.ಟಿ.ದೇವೇಗೌಡ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ರಾಜೀನಾಮೆ ಕೊಡಿ ಕಾಂಗ್ರೆಸ್ ನವರು, ಮುಖ್ಯಮಂತ್ರಿ ರಾಜೀನಾಮೆ ನೀಡಿ ಎಂದು ಬಿಜೆಪಿ, ದಳದವರು ಕೇಳುವುದು ಸರಿಯಲ್ಲ. ಹಾಗೆ ರಾಜೀನಾಮೆ ನೀಡುತ್ತಾ ಹೋದರೆ, ವಿಧಾನಸೌಧದಲ್ಲಿರುವ ಶೇ. 75 ಮಂದಿ ರಾಜೀನಾಮೆ ನೀಡಬೇಕಾಗುತ್ತದೆ. ಕೇಂದ್ರ ಹಾಗೂ ರಾಜ್ಯದಲ್ಲಿ ಬಹಳಷ್ಟು ಮಂದಿ ಇದ್ದಾರೆ ಎಂದು ಹೇಳಿದರು.
ಚನ್ನಪಟ್ಟಣ ಉಪಚುನಾವಣೆ ಪ್ರಚಾರದಲ್ಲಿ ಪ್ರಚಾರ ಕಾರ್ಯದಿಂದ ಹೊರಗುಳಿದಿರುವ ವಿಚಾರಕ್ಕೆ ಸಂಬಂಧಿಸಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಯಾರು ಕೂಡ ನನ್ನನ್ನು ಚುನಾವಣೆ ಪ್ರಚಾರಕ್ಕೆ ಬನ್ನಿ ಎಂದು ಕರೆದಿಲ್ಲ. ಕೋರ್ ಕಮಿಟಿ ಅಧ್ಯಕ್ಷನಾಗಿದ್ದರೂ ಪ್ರಚಾರದ ಪಟ್ಟಿಯಿಂದ ನನ್ನ ಹೆಸರನ್ನು ತೆಗೆದಿದ್ದಾರೆ. ಯಾಕಾಗಿ ಈ ರೀತಿ ಮಾಡಿದ್ದಾರೆ ಎಂದು ಅವರೇ ಹೇಳಬೇಕು ಎಂದರು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಶಾಸಕನಾದ ನನ್ನ ಪ್ರಭಾವ ಬಳಸಿ ಸಹೋದರಿಯ ಮಗ ಮಹೇಂದ್ರ 19 ಸೈಟ್ ಪಡೆದಿರುವ ಬಗ್ಗೆ ದೂರುದಾರ ಸ್ನೇಹಮಯಿ ಕೃಷ್ಣ ಆರೋಪದಲ್ಲಿ ಹುರುಳಿಲ್ಲ. ಸೈಟ್ ಕೊಡುವ ಪ್ರಕ್ರಿಯೆಯಲ್ಲಿ ತಪ್ಪಾಗಿದ್ದರೆ ಶಿಕ್ಷೆ ಅನುಭವಿಸುತ್ತಾರೆ. ನನ್ನ ಸಂಬಂಧಿಯೇ ಆಗಲಿ, ಯಾರೇ ಆಗಲಿ ಶಿಕ್ಷೆಯಾಗಲಿ. ಕಾನೂನಿನ ವಿರುದ್ಧವಾಗಿ ಮಾಡಿದರೆ ಶಿಕ್ಷೆಯಾಗಲಿ ಎಂದು ತಿಳಿಸಿದರು.