ಉಡುಪಿ, ನ.17(DaijiworldNews/AA): ಹಿಟ್ ಆ್ಯಂಡ್ ರನ್ ನಡೆಸಿ ಆಟೋ ಚಾಲಕನ ಸಾವಿಗೆ ಕಾರಣವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ಬೆಳಪು ದೇವಿಪ್ರಸಾದ್ ಶೆಟ್ಟಿ ಅವರ ಪುತ್ರ ಪ್ರಜ್ವಲ್ ಶೆಟ್ಟಿಯನ್ನು ಶಿರ್ವ ಪೊಲೀಸರು ಬಂಧಿಸಿದ್ದಾರೆ.
ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಬೆಳಪುವಿನ ಮಿಲಿಟರಿ ಕಾಲೊನಿಯಲ್ಲಿ ನವೆಂಬರ್ 11 ರಂದು ನಡೆದಿದ್ದ ಈ ಅಪಘಾತದಲ್ಲಿ ಆಟೋ ಚಾಲಕ ಮಹಮ್ಮದ್ ಹುಸೇನ್ ಮೃತಪಟ್ಟಿದ್ದರು.
ವರದಿಗಳ ಅನುಸಾರ, ಹುಸೇನ್ ಅವರು ನ.11ರ ಮುಂಜಾನೆ ತನ್ನ ದ್ವಿಚಕ್ರ ವಾಹನದಲ್ಲಿ ಪುಂಚಲ್ಕಾಡುವಿನಿಂದ ಬೆಳಪುಗೆ ತೆರಳುತ್ತಿದ್ದರು. ಮರಿಯಾ ಬೇಕರಿ ಬಳಿ ಬರುತ್ತಿದ್ದಂತೆಯೇ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದ ವಾಹನ ಚಾಲಕ ಇವರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಹುಸೇನ್ ಅವರ ಕಾಲು, ಕೈ, ತಲೆಗೆ ತೀವ್ರ ಗಾಯಗಳಾಗಿವೆ. ಮೊದಲಿಗೆ ಅವರನ್ನು ಅಜ್ಜರಕಾಡಿನ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಖಾಸಗಿ ಆಸ್ಪತ್ರೆಗೆ ವರ್ಗಾಯಿಸಲಾಯಿತು.
ಅಪಘಾತಕ್ಕೊಳಗಾದ ಗಾಯಾಳುವಿಗೆ ಸಹಾಯ ಮಾಡದೆ ಅಥವಾ ಪೊಲೀಸರಿಗೆ ಘಟನೆಯ ಬಗ್ಗೆ ವರದಿ ಮಾಡದೆ ಪ್ರಜ್ವಲ್ ಶೆಟ್ಟಿ ಅವರು ಸ್ಥಳದಿಂದ ಪರಾರಿಯಾಗಿದ್ದಾರೆ. ಅಪಘಾತದ ಭೀಕರತೆಗೆ ಸಾಕ್ಷಿಯಾಗಿದ್ದ ಸಿಸಿಟಿವಿ ದೃಶ್ಯಾವಳಿಯು ನಂತರ ಲಭಿಸಿದ್ದು, ತನಿಖೆಗೆ ನೆರವಾಗಿದೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಘಟನೆ ಬಳಿಕ ತಲೆಮರೆಸಿಕೊಂಡಿದ್ದ ಪ್ರಜ್ವಲ್ ಶೆಟ್ಟಿಯನ್ನು ಕೊನೆಗೂ ಶಿರ್ವ ಪೊಲೀಸರು ಬಂಧಿಸಿದ್ದು, ಪ್ರಕರಣದ ತನಿಖೆ ನಡೆಯುತ್ತಿವೆ.