ಮಂಗಳೂರು, ನ.17(DaijiworldNews/AA): ಕೋವಿಡ್ ಹಗರಣ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಆಯೋಗ ಕೊಟ್ಟ ವರದಿಯನ್ವಯ ನಾವು ಕ್ರಮ ತೆಗೆದುಕೊಳ್ಳಲೇ ಬೇಕಿದೆ ಎಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಹಗರಣ ಆರೋಪದ ಪ್ರಕರಣದ ತನಿಖೆಯನ್ನು ಯಾವುದೇ ದುರುದ್ದೇಶದಿಂದ ಮಾಡಲಾಗುತ್ತಿಲ್ಲ. ನ್ಯಾಯಾಧೀಶರ ನೇತೃತ್ವದಲ್ಲಿ ಆಯೋಗವನ್ನು ರಚನೆ ಮಾಡಿದ್ದೇವೆ. ಅವರು ಈಗಾಗಲೇ ಪ್ರಥಮ ವರದಿಯನ್ನು ಕೊಟ್ಟಿದ್ದು, ಎರಡನೇ ವರದಿಯನ್ನು ಸದ್ಯದಲ್ಲೇ ಕೊಡಲಿದ್ದಾರೆ ಎಂದು ಹೇಳಿದರು.
ಪ್ರಥಮ ವರದಿಯಲ್ಲಿ ಬಹಳ ಗಂಭೀರವಾದ ವಿಷಯಗಳನ್ನು ತಿಳಿಸಲಾಗಿದ್ದು, ಯಾವ ಕಾರಣಕ್ಕೆ ಮೋಸ, ಅನ್ಯಾಯ, ಭ್ರಷ್ಟಾಚಾರ ಆಗಿದೆ ಎಂಬ ಅನೇಕ ವಿಷಯಗಳನ್ನು ಸ್ಪಷ್ಟವಾಗಿ ತಿಳಿಸಲಾಗಿದೆ. ಹಾಗಾಗಿ ಆಯೋಗ ನೀಡಿದ ವರದಿಯನ್ವಯ ನಾವು ಕ್ರಮ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.