ಮಂಗಳೂರು, ನ.17(DaijiworldNews/AA): 1.64 ಲ.ರೂ. ಮೌಲ್ಯದ ಮದ್ಯವನ್ನು ಅಬಕಾರಿ ಇಲಾಖೆಯವರು ದಾಳಿ ನಡೆಸಿ ವಶಕ್ಕೆ ಪಡೆದ ಘಟನೆ ನಗರದ ಕೊಡಿಯಾಲಬೈಲ್ ಕಂಬಳಕ್ರಾಸ್ನ ಕಟ್ಟಡವೊಂದರ ಮೊದಲನೇ ಮಹಡಿಗೆ ಶುಕ್ರವಾರ ಮಧ್ಯರಾತ್ರಿ ನಡೆದಿದೆ.
ಕರ್ನಾಟಕ ಅಬಕಾರಿ ಕಾಯಿದೆ 1965ಕ್ಕೆ ವಿರುದ್ಧವಾಗಿ ಮಾರಾಟ ಮಾಡುವ ಉದ್ದೇಶದಿಂದ ದಾಸ್ತಾನು ಇರಿಸಲಾಗಿದ್ದ 19.5 ಲೀ. ಡಿಫೆನ್ಸ್ ಮದ್ಯ, 52.5 ಲೀ. ಗೋವಾ ರಾಜ್ಯದ ಮದ್ಯ, 3 ಲೀ. ಕರ್ನಾಟಕ ರಾಜ್ಯದ ಮದ್ಯ, 3 ಲೀ. ತೆರಿಗೆ ರಹಿತ ವಿದೇಶ ಮದ್ಯ, 21.5 ಲೀ. ಗೋವಾ ರಾಜ್ಯದ ಬಿಯರ್, 0.33 ಲೀ. ಕರ್ನಾಟಕ ರಾಜ್ಯದ ಬಿಯರ್ 1.300 ಲೀ. ಡಿಫೆನ್ಸ್ ಬಿಯರ್ ಸೇರಿದಂತೆ ಒಟ್ಟು 101.30 ಲೀ. ಮದ್ಯವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿ ಅಮೀತ್ ಎ.ಪಿ. ತಲೆಮರೆಸಿಕೊಂಡಿದ್ದಾನೆ.
ಮಂಗಳೂರು ವಿಭಾಗ ಅಬಕಾರಿ ಜಂಟಿ ಆಯುಕ್ತ ಡಾ.ಸಿ.ಎಚ್.ಬಾಲಕೃಷ್ಣ ಅವರ ಆದೇಶದಂತೆ, ದ.ಕ ಜಿಲ್ಲಾ ಉಪ ಆಯುಕ್ತ ಟಿ.ಎಂ.ಶ್ರೀನಿವಾಸ ಅವರ ನಿರ್ದೇಶನದಂತೆ, ಮಂಗಳೂರು ಉಪವಿಭಾಗದ ಅಬಕಾರಿ ಉಪ ಅಧೀಕ್ಷಕ ಸಂತೋಷ ಮೊಡಗಿ ಅವರ ನೇತೃತ್ವದಲ್ಲಿ ದಾಳಿ ನಡೆಯಿತು. ಅಬಕಾರಿ ನಿರೀಕ್ಷಕಿ ಸುನಿತಾ, ಉಪನಿರೀಕ್ಷಕ ಸುಧೀರ್ ಎ, ಹಿರಿಯ ಪೇದೆ ಸಂದೀಪ್ ಕುಮಾರ್ ಎ, ಅಬಕಾರಿ ಪೇದೆಯವರಾದ ಮಾರುತಿ ಡಿ.ಜೆ, ನವೀನ್ ನಾಯ್ಕ ಬಿ, ಹಿರಿಯ ವಾಹನ ಚಾಲಕ ರಘುರಾಮ, ಕೊಡಿಯಾಲಬೈಲ್ ಗ್ರಾಮದ ಪ್ರಭಾರ ಗ್ರಾಮ ಆಡಳಿತಾಧಿಕಾರಿ ಪ್ರದೀಪ್ ಶೆಣೈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.