ಕಾರ್ಕಳ, ನ.17(DaijiworldNews/AA): ತಾಲೂಕಿನ ಮಿಯಾರ್ ಗ್ರಾಮ ಪಂಚಾಯತ್ನ ಎಸ್ಎಲ್ಆರ್ಎಂ ಸ್ವಚ್ಛತಾ ವಾಹನ ಸಿಬ್ಬಂದಿಗಳು ಕಸದಲ್ಲಿ ಸಿಕ್ಕಿದ 25 ಗ್ರಾಂ ಚಿನ್ನದ ಸರ ಮತ್ತು 2921 ರೂ. ನಗದನ್ನು ಅದರ ಮಾಲೀಕರಿಗೆ ಹಿಂದಿರುಗಿಸಿದ್ದಾರೆ.
ನ. 15 ರಂದು ಮಿಯಾರು ಗ್ರಾಮದ ಬೋರ್ಕಟ್ಟೆ ವ್ಯಾಪ್ತಿಯಲ್ಲಿ ಒಣಕಸ ಸಂಗ್ರಹಿಸಿ ವಿಂಗಡನೆ ಮಾಡುವ ಸಮಯದಲ್ಲಿ ಒಂದು ಪರ್ಸಿನಲ್ಲಿ ಅಂದಾಜು 25 ಗ್ರಾಂ ಹವಳದ ಚಿನ್ನದ ಸರ, 2921.ರೂ. ನಗದು ಸಿಕ್ಕಿದೆ. ಕೂಡಲೇ ಸಿಬ್ಬಂದಿಗಳು ಈ ವಿಷಯವನ್ನು ಗ್ರಾ. ಪಂ. ಗಮನಕ್ಕೆ ತಂದಿದ್ದಾರೆ. ಪರ್ಸ್ ಪರಿಶೀಲಿಸಿದಾಗ ಗಣೇಶ್ ಶೆಣೈ ಬೊರ್ಕಟ್ಟೆ ಅವರ ಆಧಾರ್ ಕಾರ್ಡ್ ಪ್ರತಿ ಇತ್ತು. ಅವರನ್ನು ಸಂಪರ್ಕಿಸಿದಾಗ ತಾಯಿಗೆ ಕಣ್ಣಿನ ದೃಷ್ಟಿ ಸರಿ ಇಲ್ಲದ ಕಾರಣ ಕಸದಲ್ಲಿ ಹಾಕಿದ್ದಾರೆ. ಆ ಪರ್ಸ್ ಅನ್ನು ಮನೆಯಲ್ಲಿ ಹುಡುಕುತ್ತಿದ್ದ ಬಗ್ಗೆ ತಿಳಿಸಿದ್ದಾರೆ.
ಸ್ವತ್ತನ್ನು ಗ್ರಾ. ಪಂ. ಮೂಲಕ ಮಧ್ಯಾಹ್ನ ಒಪ್ಪಿಸಲಾಗಿದೆ. ಕಳೆದು ಹೋದ ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಮರಳಿ ಸಿಕ್ಕಿದ್ದರಿಂದ ಸಂತೋಷಗೊಂಡ ಗಣೇಶ್ ಶೆಣೈರವರು ಗ್ರಾಮ ಪಂಚಾಯತ್ ಎಸ್.ಎಲ್. ಆರ್.ಎಂ ಸಿಬ್ಬಂದಿಗಳಾದ ಲಲಿತ, ಸುನೀತ ಹಾಗೂ ಕೃಷ್ಣ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.