ಕುಂದಾಪುರ, ನ.16(DaijiworldNews/AK):ಪ್ರತಿಭೆ ಮತ್ತು ಅವಕಾಶ ಇವೆರಡು ಉತ್ತಮ ಸಮಯದಲ್ಲಿ ಸಂಧಿಸಿದಾಗ ಮ್ಯಾಜಿಕ್ ಆಗಲು ಸಾಧ್ಯ. ನಮ್ಮಲ್ಲಿರುವ ಪ್ರತಿಭೆಯನ್ನು ಹೊರಹೊಮ್ಮಿಸಲು ಅವಕಾಶಗಳು ದೊರೆಯುತ್ತಿರುತ್ತದೆ. ಹೀಗೆ ಸಿಕ್ಕಿದ ಅವಕಾಶಗಳನ್ನು ಉಪಯೋಗಿಸಿಕೊಳ್ಳುವ ಚಾಕಚಕ್ಯತೆ ಮತ್ತು ಬುದ್ಧಿವಂತಿಕೆ ನಮ್ಮಲ್ಲಿರಬೇಕು. ನಮ್ಮಲ್ಲಿರುವ ಕೌಶಲ್ಯವನ್ನು ಇನ್ನಷ್ಟು ಬೆಳೆಸಿಕೊಳ್ಳಬೇಕು. ಕಲೆ ಎಂಬುದು ಶಿಕ್ಷಣದ ಒಂದು ಭಾಗವಾಗಿದ್ದು, ಕಲೆ ಕೌಶಲ್ಯವನ್ನು ಮೀರಿದ್ದು. ಒಳ್ಳೆಯ ಮನುಷ್ಯರಾಗಿರುವುದು ಕಲಾವಿದರಿಗೆ ಇರುವ ತಾಕತ್ತು ಎಂದು ಚಲನಚಿತ್ರ ನಟಿ ವಿದುಷಿ ಮಾನಸಿ ಸುಧೀರ್ ಹೇಳಿದರು.
ಮೂಡ್ಲಕಟ್ಟೆ ಐ.ಎಂ.ಜೆ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಆಶ್ರಯದಲ್ಲಿ ಕಾಲೇಜಿನ ವಠಾರದಲ್ಲಿ ಜರಗಿದ ಪಿಯುಸಿ ವಿದ್ಯಾರ್ಥಿಗಳ ರಾಜ್ಯ ಮಟ್ಟದ ಫೆಸ್ಟ್ ‘ನವೋಶ್ಮೇಶ್-2024’ ನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಯಾಗಿದ್ದ ಉಡುಪಿ ನೇವಿಯಸ್ ಸೊಲ್ಯುಷನ್ನ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ಸುಯೋಗ್ ಶೆಟ್ಟಿ ಮಾತನಾಡಿ, ಟೀಮ್ವರ್ಕ್ ಮತ್ತು ನಾಯಕತ್ವ, ನಾವೀನ್ಯತೆ ಮತ್ತು ಸೃಜನಶೀಲತೆ ಜೀವನದಲ್ಲಿ ಯಶಸ್ಸು ಪಡೆಯಲು ಅತ್ಯವಶ್ಯ. ಸೋಲು ಮತ್ತು ಗೆಲುವುಗಳನ್ನು ನಾವು ಸ್ವೀಕರಿಸುವ ರೀತಿ ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತದೆ ಎಂದರು.
ಕಾಲೇಜಿನ ಪ್ರಾಂಶುಪಾಲೆ ಡಾ.ಪ್ರತಿಭಾ ಎಂ.ಪಟೇಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಕಾಲೇಜಿನ ಉಪಪ್ರಾಂಶುಪಾಲ ಪ್ರೊ.ಜಯಶೀಲ ಕುಮಾರ್, ಕಾರ್ಯಕ್ರಮದ ಕೋ-ಆರ್ಡಿನೇಟರ್ಗಳಾದ ಸಿಂಚನ್, ನಿತಿನ್ ಮತ್ತು ಹನಾ ಶೇಕ್ ಉಪಸ್ಥಿತರಿದ್ದರು. ಇದೇ ಸಂದರ್ಭ ನಟಿ ಮಾನಸಿ ಸುಧೀರ್ ಮತ್ತು ಸುಯೋಗ ಶೆಟ್ಟಿ ಅವರನ್ನು ಗೌರವಿಸಲಾಯಿತು.
ಫೆಸ್ಟ್ ಸಂಯೋಜಕಿ ಅರ್ಚನಾ ಗದ್ದೆ ಸ್ವಾಗತಿಸಿದರು. ಐಎಂಜೆ ವಿದ್ಯಾಸಂಸ್ಥೆಗಳ ಬ್ರಾಂಡ್ ಬಿಲ್ಡಿಂಗ್ ನಿರ್ದೇಶಕ ಡಾ.ರಾಮಕೃಷ್ಣ ಹೆಗ್ಡೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿದ್ಯಾರ್ಥಿನಿ ರಕ್ಷಿತಾ ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿನಿಯರಾದ ಸಿಂಚನಾ ಮತ್ತು ಸಂತೃಪ್ತಿ ಕಾರ್ಯಕ್ರಮ ನಿರ್ವಹಿಸಿದರು. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ ಹಾಗೂ ವಿವಿಧ ಜಿಲ್ಲೆಗಳಿಂದ ಪಿಯು ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.