ಬಂಟ್ವಾಳ , ನ.16(DaijiworldNews/AK):ವಿಟ್ಲ ಪಟ್ಟಣ ಪಂಚಾಯತಿ ವ್ಯಾಪ್ತಿಯ ಅಪ್ಪೆರಿ ಪಾದೆಯಲ್ಲಿ ಮಲತ್ಯಾಜ್ಯ ಘಟಕ ನಿರ್ಮಾಣಕ್ಕೆ ಸ್ಥಳೀಯರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಅಶೋಕ್ ರೈ ಅವರು ಕಾಮಗಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಅಭಿವೃದ್ಧಿ ಹೆಸರಿನಲ್ಲಿ ಜನವಿರೋಧಿ ಕಾರ್ಯಗಳಿಗೆ ಬೆಂಬಲ ಇಲ್ಲ. ಪಕ್ಷಾತೀತವಾಗಿ ಜನರ ಭಾವನೆಗಳಿಗೆ ಸ್ಪಂದಿಸಿ ನಿರ್ಧಾರ ಕೈಗೊಳ್ಳುವುದು ಅನಿವಾರ್ಯ ಎಂದರು. ಮಲತ್ಯಾಜ್ಯ ಘಟಕ ನಿರ್ಮಾಣ ಬೇಡ ಎಂದು ಈಗಾಗಲೇ ಪಟ್ಟಣ ಪಂಚಾಯತಿಗೆ ಸೂಚಿಸಿದ್ದೆ ಎಂದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಸ್ಥಳೀಯರು ಇಲ್ಲಿ 250 ರಷ್ಟು ಮನೆಗಳಿವೆ. ಹಾಗೂ ಸೀಮೆಯ ದೇವರಾದ ಪಂಚಲಿಂಗೇಶ್ವರ ದೇವರ ಜಾತ್ರೆಯ ಜಳಕದ ಕಟ್ಟೆ ಇದೆ. ಹಾಗಾಗಿ ಇಲ್ಲಿ ಘಟಕ ಸ್ಥಾಪನೆಗೆ ಬಿಡಲಾರೆವು ಎಂದರು.ವಿಟ್ಲ ಪಟ್ಟಣ ಪಂಚಾಯತಿ ಸದಸ್ಯ ಆಶ್ರಫ್, ವಿಟ್ಲ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ರಮಾನಾಥ ವಿಟ್ಲ, ಅಳಿಕೆ ಗ್ರಾಮ ಪಂಚಾಯತಿ ಅಧ್ಯಕ್ಷ ಪದ್ಮನಾಭ ಸಣ್ಣಗುತ್ತು ಮೊದಲಾದವರು ಉಪಸ್ಥಿತರಿದ್ದರು.
ಇತ್ತ ವಿಟ್ಲಪಟ್ಟಣ ಪಂಚಾಯತ್ ವ್ಯಾಪ್ತಿಯ ಅಪ್ಪೇರಿಪಾದೆ ಮಲತ್ಯಾಜ್ಯ ಘಟಕ ನಿರ್ಮಾಣಕ್ಕೆ ಪಟ್ಟಣ ಪಂಚಾಯತಿ ಬೆಂಬಲ ಇಲ್ಲ ಎಂದು ಪಟ್ಟಣ ಪಂಚಾಯತಿ ಅಧ್ಯಕ್ಷ ಕರುಣಾಕರ ನಾಯ್ತೊಟ್ಟು ತಿಳಿಸಿದರು.
ವಿಟ್ಲದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು , ಆಡಳಿತಾಧಿಕಾರಿ ಅವಧಿಯಲ್ಲಿ ಮಂಜೂರಾದ ಯೋಜನೆ ಅದು ಆರಂಭಗೊಂಡ ಘಟಕ ನಿರ್ಮಾಣ ಕಾಮಗಾರಿಗೆ ಬೆಂಬಲ ಇಲ್ಲ ಎಂದರು.ಸ್ಥಳೀಯ ನಿವಾಸಿಗಳು ಘಟಕ ನಿರ್ಮಾಣದಿಂದ ಆಗಬಹುದಾದ ಸಮಸ್ಯೆಗಳ ಬಗ್ಗೆ ಪಟ್ಟಣ ಪಂಚಾಯತಿಗೆ ದೂರು ಮತ್ತು ಮನವಿ ಸಲ್ಲಿಸಿದ್ದಾರೆ. ಜನರ ಇಚ್ಛೆಗೆ ವಿರುದ್ಧವಾಗಿ ನಡೆಯುವುದಿಲ್ಲ ಎಂದು ಪಟ್ಟಣ ಪಂಚಾಯತಿ ಅಧ್ಯಕ್ಷರು ತಿಳಿಸಿದರು.
ಮಲತ್ಯಾಜ್ಯ ಘಟಕ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಅಗತ್ಯ ಇದೆ. ಆದರೆ ಜನರಿಗೆ ಸಮಸ್ಯೆ ಆಗದ ಸ್ಥಳವನ್ನು ಹುಡುಕಿ ನಿರ್ಮಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪಟ್ಟಣ ಪಂಚಾಯತಿ ಉಪಾಧ್ಯಕ್ಷೆ ಸಂಗೀತಾ ಪಾಣೆಮಜಲು, ಸದಸ್ಯರಾದ ರವೀಶ್ ವಿಟ್ಲ, ವಸಂತ ಉಪಸ್ಥಿತರಿದ್ದರು.