ಉಡುಪಿ, ನ.16(DaijiworldNews/AA): ಮುಂಬೈನಿಂದ ತಂದಿದ್ದ ಗಾಂಜಾವನ್ನು ಸಾಗಿಸುತ್ತಿದ್ದ ಮೂವರನ್ನು ಸೆನ್ ಪೊಲೀಸರು ಬಂಧಿಸಿದ್ದು, ಆರೋಪಿಗಳಿಂದ 10 ಕೆಜಿ 138 ಗ್ರಾಂ ತೂಕದ 8,11,040 ರೂ. ಮೌಲ್ಯದ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಬ್ರಹ್ಮಾವರ ಉಪ್ಪೂರು ನಿವಾಸಿಗಳಾದ ಸತ್ಯರಾಜ್ ಯಾನೆ ತಂಬಿ ಅಣ್ಣ (32), ಕೃಷ್ಣ (43), ಶಕಿಲೇಶ್ (25) ಬಂಧಿತ ಆರೋಪಿಗಳೆಂದು ತಿಳಿದುಬಂದಿದೆ.
ನವೆಂಬರ್ 15 ರಂದು, ಸೆನ್ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ರಾಮಚಂದ್ರ ನಾಯಕ್ ನೇತೃತ್ವದಲ್ಲಿ, ಸಿಬ್ಬಂದಿ ಪ್ರವೀಣ್ ಕುಮಾರ್, ಪ್ರವೀಣ್, ಪ್ರಶಾಂತ್, ಮಾಯಪ್ಪ ಮತ್ತು ಪರಶುರಾಮ್ ಅವರನ್ನು ಒಳಗೊಂಡ ತಂಡ ಬ್ರಹ್ಮಾವರದ ಉಪ್ಪೂರು ಗ್ರಾಮದ ಕೆಜಿ ರಸ್ತೆ ಕ್ರಾಸ್ ಬಳಿ ಕಾರ್ಯಾಚರಣೆ ನಡೆಸಿತು. ಈ ವೇಳೆ ಮುಂಬೈನಿಂದ ತಂದಿದ್ದ ನಿಷೇಧಿತ ಮಾದಕ ವಸ್ತು ಗಾಂಜಾವನ್ನು ಸಾಗಿಸುತ್ತಿದ್ದ ಆರೋಪದ ಮೇಲೆ ಮೂವರನ್ನು ಪೊಲೀಸ್ ತಂಡ ಬಂಧಿಸಿದೆ.
ಬಂಧಿತರಿಂದ 8,11,040 ರೂ ಮೌಲ್ಯದ 10 ಕೆಜಿ 138 ಗ್ರಾಂ ಗಾಂಜಾ, 1,570 ನಗದು, 1,570 ಮೌಲ್ಯದ ಮೂರು ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 8,42,610 ರೂ. ಎಂದು ಅಂದಾಜಿಸಲಾಗಿದೆ.
ಈ ಕುರಿತು ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.