ಕಾರ್ಕಳ, ನ.16(DaijiworldNews/AA): ಬೋಳ ಗ್ರಾಮದ ಎರಡು ಮನೆಗಳಲ್ಲಿ ಭಾರಿ ಪ್ರಮಾಣದಲ್ಲಿ ಅಕ್ರಮ ಗೋವಾ ಮದ್ಯ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ ಮಾಡಲಾಗಿದೆ ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬೋಳ ಗ್ರಾಮದ ಅಬ್ದನಡ್ಕದಲ್ಲಿರುವ ಅವಿನಾಶ್ ಮಲ್ಲಿ ಎಂಬುವವರಿಗೆ ಸೇರಿದ ಅವನಿ ನಿಲಯ ಮನೆಗೆ ಹಾಗೂ ಅದೇ ಗ್ರಾಮದ ಮರಿಮಾರು ಗುತ್ತು ಎಂಬ ಮನೆ ಮೇಲೆ ಏಕಕಾಲದಲ್ಲಿ ಅಬಕಾರಿ ಇಲಾಖೆ ದಾಳಿ ನಡೆಸಿತ್ತು. 272 ಪೆಟ್ಟಿಗೆಗಳಲ್ಲಿ ಒಟ್ಟು 2360.850 ಲೀ. ವಿವಿಧ ಬ್ರಾಂಡ್ ಗಳ ಗೋವಾ ಮದ್ಯವನ್ನು ಅಕ್ರಮವಾಗಿ ದಾಸ್ತಾನು ಇರಿಸಿರುವುದನ್ನು ಪತ್ತೆ ಹಚ್ಚಿ ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿರುತ್ತದೆ. ದಾಳಿ ವೇಳೆ ಅಂದಾಜು 15.00 ಲಕ್ಷ ರೂ. ಮೌಲ್ಯದ ಗೋವಾ ಮದ್ಯವನ್ನು ವಶಕ್ಕೆ ಪಡೆಯಲಾಗಿತ್ತು.
ಆರೋಪಿಗಳಾದ ಆದಿ ಉಡುಪಿಯ ಪ್ರಶಾಂತ್ ಸುವರ್ಣ ಹಾಗೂ ಬೋಳದ ಅವಿನಾಶ್ ಮಲ್ಲಿ ತಲೆಮರೆಸಿಕೊಂಡಿದ್ದಾರೆ. ಹೀಗಾಗಿ ಇಲಾಖೆ ಅಧಿಕಾರಿಗಳ ತಂಡ ಆರೋಪಿಗಳ ಪತ್ತೆ ಕಾರ್ಯ ಮುಂದುವರಿಸಿದೆ. ಚೆಕ್ಪೋಸ್ಟ್, ಗ್ರಾಮೀಣ ಭಾಗ, ನಗರ ಪ್ರದೇಶದಲ್ಲಿ ನಿಗಾ ವಹಿಸಲಾಗಿದೆ. ಇನ್ನು ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ.