ಕಡಬ, ನ.15(DaijiworldNews/AA): ಮುಂದಿನ ಜನವರಿ 15 ರೊಳಗೆ ಜಂಟಿ ಸರ್ವೆ ಮಾಡಿ ಗಡಿಗುರುತು ಮಾಡದಿದ್ದಲ್ಲಿ ರಾಜಕೀಯದವರನ್ನು ಸೇರಿಸದೆ ಬರೀ ರೈತರೇ ಸೇರಿ ಪ್ರತಿಭಟನೆ ಮಾಡಲಾಗುವುದು. ಐಎಎಸ್ ದರ್ಜೆಯ ಅಧಿಕಾರಿಗಳು ಮಾತ್ರ ಬಂದು ನಮ್ಮ ಮನವಿ ಸ್ವೀಕರಿಸಬೇಕು. ಇಲ್ಲದಿದ್ದರೆ ರಸ್ತೆ ತಡೆ ಮಾಡಲಾಗುವುದು ಎಂದು ಮಲೆನಾಡು ಜನಹಿತ ರಕ್ಷಣಾ ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ ಎಚ್ಚರಿಕೆ ನೀಡಿದರು.
ಶಿರಾಡಿ ಗ್ರಾಮದ ಗುಂಡ್ಯದಲ್ಲಿ ಇಂದು ನಡೆದ ಕಸ್ತೂರಿ ರಂಗನ್ ವರದಿ ವಿರುದ್ದ ಬೃಹತ್ ಪ್ರತಿಭಟನಾ ಸಭೆಯ ಅಧಕ್ಷತೆ ವಹಿಸಿ ಮಾತನಾಡಿದ ಅವರು, ರೈತರೆಂದರೆ ಹೆಬ್ಬೆಟ್ಟಲ್ಲ ನೆನಪಿರಲಿ, ವಿವಿಧ ಕ್ಷೇತ್ರದಲ್ಲಿ ವಿದ್ಯಾಭ್ಯಾಸ ಪಡೆದ ವಿದ್ಯಾವಂತರು ಇದ್ದಾರೆ. ನಾವು ಪ್ರತಿಭಟನೆಗೆ ಮಾನಸಿಕವಾಗಿ ಸಿದ್ದರಾಗಿಯೇ ಬಂದಿದ್ದೇವೆ. ಯಾವುದೇ ಕೇಸಿಗೆ ನಾವು ಹೆದರುವುದಿಲ್ಲ. ಇಲ್ಲಿನ ಭ್ರಷ್ಟ ಅಧಿಕಾರಿಗಳಿಗೆ ಮನವಿ ಕೊಡುವುದಿಲ್ಲ. ಅಕ್ರಮ ಸಕ್ರಮಕ್ಕೆ ಹಣ ಪಡೆದ ಬಗ್ಗೆ ವೀಡಿಯೋ ಸಹಿತ ಸಾಕ್ಷಿ ಇದೆ. ಕಂದಾಯ ಇಲಾಖೆಯವರು ಅಕ್ರಮ ಮಾಡಿರುವುದಕ್ಕೆ ದಾಖಲೆ ಇದೆ. ಕಂದಾಯ ಮತ್ತು ಅರಣ್ಯ ಇಲಾಖೆಯ ವಿರುದ್ದ ಹೋರಾಟ ಮಾಡಲಾಗುವುದು. ಅಗತ್ಯ ಬಂದರೆ ಬೆಂಗಳೂರು ಚಲೋಗೆ ಸಿದ್ದರಿದ್ದೇವೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ನಾಯಕರು ಮುಂದೆ ನಿಂತು ಸಮಸ್ಯೆಗೆ ಬಗೆಹರಿಸಬೇಕು ಎಂದು ಹೇಳಿದರು.
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಸಭೆಯನ್ನು ಉದ್ಘಾಟಿಸಿದರು. ಸ್ವಾತಂತ್ರ್ಯ ಹೋರಾಟಗಾರ ಸುಭಾಷ್ ಚಂದ್ರ ಬೋಸ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.
ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಸಕಲೇಶಪುರ ಶಾಸಕ ಸಿಮೆಂಟ್ ಮಂಜು, ಮಾಜಿ ಶಾಸಕ ಸಂಜೀವ ಮಠಂದೂರು, ಧರ್ಮಗುರುಗಳಾದ ರೆ.ಫಾ.ಆದರ್ಶ ಜೋಸೆಫ್, ರೆ.ಫಾ.ಸಿಬಿ, ಜಿ.ಪಂ. ಮಾಜಿ ಸದಸ್ಯರಾದ ಕೃಷ್ಣ ಶೆಟ್ಟಿ ಕಡಬ, ಪಿ.ಪಿ. ವರ್ಗೀಸ್, ಸರ್ವೋತ್ತಮ ಗೌಡ, ಆಶಾ ತಿಮ್ಮಪ್ಪ ಗೌಡ, ಹರೀಶ್ ಕಂಜಿಪಿಲಿ, ವೆಂಕಟ್ ದಂಬೆಕೋಡಿ, ಪ್ರಮುಖರಾದ ಎ.ವಿ. ತೀರ್ಥರಾಮ, ವೆಂಕಪ್ಪ ಗೌಡ ಸುಳ್ಯ, ವೆಂಕಟ್ ವಳಲಂಬೆ, ಸುಧೀರ್ ಕುಮಾರ್ ಶೆಟ್ಟಿ, ಮಹಮ್ಮದ್ ಆಲಿ ಹೊಸಮಠ ಮತ್ತಿತರರು ವೇದಿಕೆಯಲ್ಲಿದ್ದರು.
ಸಯ್ಯದ್ ಮೀರಾ ಸಾಹೇಬ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಡಬ, ಸುಳ್ಯ, ಬೆಳ್ತಂಗಡಿ ತಾಲೂಕಿನ ಬಾಧಿತ ಗ್ರಾಮಗಳ ಸಾವಿರಾರು ಗ್ರಾಮಸ್ಥರು ಭಾಗವಹಿಸಿದ್ದರು.