ಕಾರ್ಕಳ, ನ.14(DaijiworldNews/AA): ಗೋವಾ ರಾಜ್ಯದಿಂದ ಭಾರೀ ಪ್ರಮಾಣದಲ್ಲಿ ಅಕ್ರಮ ಮದ್ಯ ಶೇಖರಣೆ ಇಟ್ಟಿದ್ದ ಕಾರ್ಕಳದ ಬೋಳ ಗ್ರಾಮದ ಎರಡು ಮನೆಗಳ ಮೇಲೆ ಅಬಕಾರಿ ಇಲಾಖೆ ಇಂದು ನಸುಕಿನ ಜಾವ ಹಠಾತ್ ದಾಳಿ ನಡೆಸಿದೆ.
ಕಾರ್ಕಳ ತಾಲೂಕು ಬೋಳ ಗ್ರಾಮದ ಅಬ್ದನಡ್ಕದಲ್ಲಿರುವ ಅವಿನಾಶ್ ಮಲ್ಲಿ ಎಂಬವರಿಗೆ ಸೇರಿದ ಅವನಿ ನಿಲಯ ಮನೆಗೆ ಹಾಗೂ ಅದೇ ಗ್ರಾಮದ ಮರಿಮಾರು ಗುತ್ತು ಎಂಬ ಮನೆಗೆ ಮೇಲೆ ಏಕಕಾಲದಲ್ಲಿ ಅಬಕಾರಿ ಇಲಾಖೆಯಿಂದ ಕಾರ್ಯಾಚರಣೆ ನಡೆದಿದೆ.
ಆರೋಪಿಗಳಾದ ಆದಿ ಉಡುಪಿಯ ಪ್ರಶಾಂತ್ ಸುವರ್ಣ ಹಾಗೂ ಬೋಳದ ಅವಿನಾಶ್ ಮಲ್ಲಿ ತಲೆಮರೆಸಿಕೊಂಡಿದ್ದಾರೆ.
ಘಟನಾ ಸ್ಥಳದಲ್ಲಿ 272 ಪೆಟ್ಟಿಗೆಗಳಲ್ಲಿ ಒಟ್ಟು 2360.850 ಲೀ. ವಿವಿಧ ಬ್ರಾಂಡ್ ಗಳ ಗೋವಾ ಮದ್ಯವನ್ನು ಅಕ್ರಮವಾಗಿ ದಾಸ್ತಾನು ಇರಿಸಿರುವುದನ್ನು ಪತ್ತೆ ಹಚ್ಚಿ ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿರುತ್ತದೆ. ವಶಪಡಿಸಿಕೊಂಡ ಗೋವಾ ಮದ್ಯದ ಅಂದಾಜು ಮೌಲ್ಯವು 15.00 ಲಕ್ಷ ರೂ. ಗಳಾಗಿರುತ್ತದೆ.
ಉಡುಪಿ ಜಿಲ್ಲಾ ಅಬಕಾರಿ ಅಧೀಕ್ಷಕ ಶಿವಪ್ರಸಾದ ಅವರ ನೇತೃತ್ವದಲ್ಲಿ ಈ ಕಾರ್ಯಾಚರನೆ ನಡೆದಿದೆ.
ಸದ್ಯಕ್ಕೆ ಪರಿಶೀಲನೆ ನಡೆಯುತ್ತಿದ್ದು, ತನಿಖೆ ನಡೆಸಲಾಗುತ್ತಿದೆ. ಶೀಘ್ರವೇ ವಿವರವಾದ ಮಾಹಿತಿ ನೀಡಲಾಗುವುದು ಎಂದು ಅಬಕಾರಿ ಡಿಸಿ ಬಿಂದು ಮಾಹಿತಿ ನೀಡಿದ್ದಾರೆ.